ರಾಜಕೀಯ ಲಾಭಕ್ಕಾಗಿ ಕಾಶ್ಮೀರದ ಚರಿತ್ರೆಯ ರಕ್ತಪಾತ ಪ್ರದರ್ಶಿಸುವುದು ದೇಶಕ್ಕೆ ಅಪಾಯ: ಸಿಪಿಎಂ ನಾಯಕ ತರಿಗಮಿ

Photo : PTI
ಶ್ರೀನಗರ, ಮಾ. 18: ಕಾಶ್ಮೀರಿ ಪಂಡಿತರ ವಲಸೆ ಕಾಶ್ಮೀರದ ಚರಿತ್ರೆಯಲ್ಲಿ ದುರಂತ ಅಧ್ಯಾಯ. ಆದರೆ ರಾಜಕೀಯ ಲಾಭಕ್ಕಾಗಿ ರಕ್ತಪಾತವನ್ನು ಪ್ರದರ್ಶಿಸುವುದು ದೇಶಕ್ಕೆ ಹಾಗೂ ಜನರಿಗೆ ಅಪಾಯ ಎಂದು ಸಿಪಿಐ (ಎಂ) ನಾಯಕ ಎಂ.ವೈ. ತರಿಗಮಿ ಶುಕ್ರವಾರ ಹೇಳಿದ್ದಾರೆ.
1990ರಲ್ಲಿ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ತೊರೆದು ಬಂದ ಘಟನೆಯನ್ನು ಆಧಾರವಾಗಿರಿಸಿ ನಿರ್ಮಿಸಲಾದ ಚಿತ್ರ ‘ದಿ ಕಾಶ್ಮೀರಿ ಫೈಲ್ಸ್’ ಇತ್ತೀಚೆಗೆ ಬಿಡುಗಡೆಯಾಗಿ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಜನರು ಅನುಭವಿಸಿರುವ ದುರಂತಗಳನ್ನು ವಸ್ತುನಿಷ್ಠವಾಗಿ ನಿರೂಪಿಸುವ ಅಗತ್ಯತೆ ಇದೆ ಎಂದರು. ‘‘ಕಳೆದ ಹಲವು ದಶಕಗಳಿಂದ ಕಾಶ್ಮೀರ ನಿರಂತರ ದುರಂತ ಪರಿಸ್ಥಿತಿ ಎದುರಿಸುತ್ತಿರುವುದು ನಮ್ಮ ದೌರ್ಭಾಗ್ಯ. ನಮ್ಮ ಸಮಾಜದ ಬಹು ಮುಖ್ಯ ಭಾಗವಾದ ಕಾಶ್ಮೀರಿ ಪಂಡಿತರು ಭೀತಿಯಿಂದ ತಮ್ಮ ಮನೆಗಳನ್ನು ತ್ಯಜಿಸಿ ಬಂದಿರುವುದು ಕಾಶ್ಮೀರದ ಅಸ್ಮಿತೆಗೆ ಧಕ್ಕೆ ಉಂಟು ಮಾಡಿದ ಅತ್ಯಂತ ನಾಚಿಕೆಗೇಡಿನ ಘಟನೆ. ಇದು ನಮ್ಮ ಚರಿತ್ರೆಯ ದುರಂತ ಅಧ್ಯಾಯ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ’’ ಎಂದು ಅವರು ಹೇಳಿದ್ದಾರೆ.







