ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲಿನ ಕೇಸ್ ವಾಪಾಸ್ ಪಡೆದುಕೊಳ್ಳಿ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಮಾ.18: ಅಂತರ ರಾಜ್ಯ ಜಲ ವಿವಾದಗಳ ಕುರಿತು ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ನಾಯಕರ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಮೇಲಿನ ಕೇಸ್ ವಾಪಾಸ್ ಪಡೆದುಕೊಳ್ಳಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಮೇಕೆದಾಟು ಯೋಜನೆ, ಮಹಾದಾಯಿ ಯೋಜನೆ, ಕಾವೇರಿ ನ್ಯಾಯಾಧೀಕರಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮೇಕೆದಾಟು ಚರ್ಚೆ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಮೇಕೆದಾಟು ಪಾದಯಾತ್ರೆ ವೇಳೆ ಹಲವು ನಾಯಕರ ಮೇಲೆ ಕೇಸ್ ದಾಖಲಾಗಿದೆ. ಈಗಾಗಲೇ ನೋಟಿಸ್ ಕೂಡ ಬಂದಿದೆ. ಸರಕಾರ ಎಲ್ಲ ನಾಯಕರ ಮೇಲಿನ ಕೇಸ್‍ಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾನೂನು ಮಂತ್ರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
ಸರ್ವಪಕ್ಷ ಸಭೆಯಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಮಂತ್ರಿಗಳ ಬಳಿ ಸರ್ವಪಕ್ಷ ನಾಯಕರ ನಿಯೋಗ ಹೋಗಲು ತೀರ್ಮಾನಿಸಲಾಯಿತು. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಮಾಜಿ ಜಲ ಸಂಪನ್ಮೂಲ ಸಚಿವ ಹೆಚ್.ಕೆ.ಪಾಟೀಲ್, ಬಂಡೆಪ್ಪ ಕಾಶಂಪೂರ್ ಸೇರಿದಂತೆ ಅಧಿಕಾರಿಗಳು, ಕಾನೂನು ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು.







