‘ಕೃಷ್ಣ ಮೇಲ್ದಂಡೆ’ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕಿತ್ತು: ಸಿದ್ದರಾಮಯ್ಯ
ಅಂತರ್ ರಾಜ್ಯ ಜಲ ವಿವಾದಗಳ ಚರ್ಚೆ

ಬೆಂಗಳೂರು, ಮಾ.18: 2011ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಕೃಷ್ಣ ಮೇಲ್ದಂಡೆ ಯೋಜನೆ ಬಗೆಗೆ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದ್ದೇವೆ, ಅದು ಮುಗಿಯುವವರೆಗೆ ನ್ಯಾಯ ಮಂಡಳಿ ನೀಡಿರುವ ತೀರ್ಪು ಕುರಿತು ನೋಟಿಫಿಕೇಷನ್ ಹೊರಡಿಸಬಾರದು ಎಂದು ಹೇಳಿತ್ತು. ಇದಾಗಿ ಹನ್ನೊಂದು ವರ್ಷ ಕಳೆದಿದೆ, ಈವರೆಗೆ ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದೆರೆಡು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದದ್ದು ಬಿಟ್ಟರೆ, ರಾಜ್ಯ ಬಿಜೆಪಿ ಸರಕಾರ ಹೆಚ್ಚಿನ ಒತ್ತಡ ಹಾಕಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೂಡಲೇ ಕೇಂದ್ರ ಸರಕಾರದ ಬಳಿಗೆ ನಿಯೋಗವನ್ನು ಕೊಂಡೊಯ್ಯುವ ಮೂಲಕ ಪ್ರಧಾನಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಬೇಕು, ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ನಾವು ಇಂದಿನ ಸಭೆಯಲ್ಲಿ ಹೇಳಿದ್ದೇವೆ. ಸರಕಾರ ನಮ್ಮ ನಿಲುವನ್ನು ಒಪ್ಪಿದೆ ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ 2018ರ ಫೆ.16ರಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಒಂದು ಸಾಮಾನ್ಯ ವರ್ಷದಲ್ಲಿ ಬಿಳಿಗೊಂಡ್ಲುವಿನಿಂದ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ಇದೆ. ಇದನ್ನು ಹೊರತು ಪಡಿಸಿ ತಮಿಳುನಾಡಿಗೆ ತಕರಾರು ಮಾಡಲು ಬೇರೆ ಯಾವ ಹಕ್ಕುಗಳು ಇಲ್ಲ. ಇನ್ನುಳಿದಂತೆ ಪರಿಸರ ಅನುಮತಿ ಪತ್ರ ಪಡೆಯಬೇಕು, ಕಾವೇರು ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಂಗೀಕಾರ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಾವೇರಿ ನಮ್ಮ ನೀರು. ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಇದು. ಹೊಳೆ ನೀರಿಗೆ ದೊಣ್ಣೆನಾಯಕನ್ನು ಕೇಳಬೇಕ? ಇದಕ್ಕೆ ತಮಿಳುನಾಡಿನ ಅಪ್ಪಣೆ ಏಕೆ ಬೇಕು? ಮಹದಾಯಿ ಯೋಜನೆಗೆ ಪರಿಸರ ಅನುಮತಿ ಪತ್ರ ಬೇಕು. ಕುಡಿಯುವ ನೀರಿನ ಯೋಜನೆಗೆ ಪರಿಸರ ಅನುಮತಿ ಬೇಡ ಎಂದು ಹಿಂದೆ ಹೇಳಿದ್ದರು, ಈಗ ಬೇಕು ಅಂದರೆ ಅನುಮತಿ ಪತ್ರ ತಗೊಳ್ಳಬೇಕಾಗುತ್ತೆ. ಎರಡೂ ಕಡೆ ಬಿಜೆಪಿ ಸರಕಾರವೇ ಇದೆ. ಹಾಗಾಗಿ ತಕ್ಷಣ ಈ ಡಬ್ಬಲ್ ಇಂಜಿನ್ ಸರಕಾರ ಅನುಮತಿ ಪತ್ರ ಪಡೆಯಲಿ ಎಂದು ಅವರು ಹೇಳಿದರು.
ನದಿಗಳ ಜೋಡಣೆ ವಿಷಯಕ್ಕೆ ವಿರೋಧ ವ್ಯಕ್ತಪಡಿಸಲು ಹೇಳಿದ್ದೇವೆ. ರಾಜ್ಯಕ್ಕೆ ಎಷ್ಟು ಪ್ರಮಾಣದ ನೀರು ಹಂಚಿಕೆಯಾಗುತ್ತೆ ಗೊತ್ತಿಲ್ಲ, ಬಜೆಟ್‍ನಲ್ಲಿ ಯೋಜನೆ ಘೋಷಣೆಗೆ ಮೊದಲು ರಾಜ್ಯ ಸರಕಾರವನ್ನು ಕೇಳಿಲ್ಲ. ಅದಕ್ಕೆ ಸರಕಾರ ಈಗಾಗಲೇ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದೆ. ಇಂದಿನ ಸಭೆಯಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನದಿಗಳ ಜೋಡಣೆಯಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ವಿನಾಕಾರಣ ಮೊಕದ್ದಮೆ ದಾಖಲಿಸಿದ್ದೀರಿ, ನಾವು ಜನರ ಪರವಾಗಿ ಹೋರಾಟ ಮಾಡಿದ್ದು. ಬಿಜೆಪಿಯವರು ಸಭೆ ಮಾಡಿದ್ರು ಅವರ ಮೇಲೆ ಯಾವ ಕೇಸ್ ಹಾಕಿಲ್ಲ, ನಮ್ಮ ಮೇಲೆ ಮಾತ್ರ ಯಾಕೆ ಎಂದು ಕೇಳಿದ್ದೇವೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಬೇಡಿ, ನಮ್ಮ ಮೇಲೆ ಹಾಕಿರುವ ಕೇಸ್‍ಗಳನ್ನು ವಾಪಾಸು ತಗೊಳ್ಳಿ ಎಂದು ಹೇಳಿದ್ದೇವೆ. ಸರಕಾರ ನೋಡ್ತೀವಿ ಎಂಬ ಉತ್ತರ ನೀಡಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರಕಾರಕ್ಕೆ ಮನದಟ್ಟಾಗಿ ಇಂದು ಮಾಜಿ ಜಲಸಂಪನ್ಮೂಲ ಸಚಿವರು, ಎಲ್ಲ ಪಕ್ಷದ ನಾಯಕರನ್ನು ಕರೆದು ಚರ್ಚೆ ಮಾಡಿದ್ದಾರೆ. ಕೃಷ್ಣ ಜಲ ವಿವಾದದ ಸಂಬಂಧ ಸುಪ್ರೀಂಕೋರ್ಟ್ ಕುಡಿಯುವ ನೀರಿನ ವಿಚಾರವಾಗಿ ಬೇರೆ ರಾಜ್ಯಗಳ ಅನುಮತಿ ಬೇಡ ಎಂದು ಹೇಳಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಪಾಲಿನ 177 ಟಿಎಂಸಿ ನೀರು ಹೊರತಾಗಿ ಉಳಿದಂತೆ ಪ್ರಶ್ನೆ ಮಾಡಲು ಅವರಿಗೆ ಯಾವುದೇ ಅಧಿಕಾರ ಇಲ್ಲ. ಕಾನೂನು ತಂಡ ಮನದಟ್ಟು ಮಾಡಿದ ನಂತರ ಈ ವಿಚಾರದಲ್ಲಿ ತಮಿಳುನಾಡಿನ ಅಡ್ಡಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ ಎಂದರು.







