ಬಾಬಾ ಬುಡಾನ್ ದರ್ಗಾ ಉರೂಸ್: ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತದಿಂದ ಅವಕಾಶ ನಿರಾಕರಣೆ

ಚಿಕ್ಕಮಗಳೂರು, ಮಾ.18: ಇನಾಂ ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದ ಆವರಣದಲ್ಲಿ ಶಾಖಾದ್ರಿ ಅವರ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿದೆ.
ಇನಾಂ ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದ ಉರೂಸ್ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಶುಕ್ರವಾರ ಶಾಖಾದ್ರಿ ಗೌಸ್ ಮೊಹಿದ್ದೀನ್ ನೇತೃತ್ವದಲ್ಲಿ ಉರುಸ್‍ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಲಾಗಿತ್ತು. ಆದರೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ಚಾದರ ಹಾಕುವುದು ಹಾಗೂ ಗಂಧ ಲೇಪನದಂತಹ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಖಾದಿ ಉರೂಸ್ ಆಚರಿಸದೇ ಹಿಂದಿರುಗಿದರು.
ಶುಕ್ರವಾರದ ಉರೂಸ್ ಹಿನ್ನೆಲೆಯಲ್ಲಿ ಜೋಳ್‍ದಾಳ್ ಗ್ರಾಮದಿಂದ ತರಲಾಗಿದ್ದ ಗಂಧವನ್ನು ಗುರುವಾರ ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ದರ್ಗಾಕ್ಕೆ ತರಲಾಗಿತ್ತು. ಶುಕ್ರವಾರ ಮಧ್ಯಾಹ್ನ ಗಂಧವನ್ನು ಉಪ್ಪಳ್ಳಿಯಿಂದ ಕಾಲ್ನಡಿಗೆಯಲ್ಲಿ ಬಾಬಾ ಬುಡಾನ್ ಗಿರಿ ಸಮೀಪದ ಅತ್ತಿಗುಂಡಿಗೆ ಕೊಂಡೊಯ್ಯಲಾಗಿತ್ತು. ಅತ್ತಿಗುಂಡಿಯಿಂದ ಶಾಖಾದ್ರಿ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಫಕೀರರು, ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಸ್ಥಳೀಯರು ಭವ್ಯ ಮೆರವಣಿಗೆ ಮೂಲಕ ಸಂದಲ್ ಗಂಧವನ್ನು ಬಾಬಾ ಬುಡನ್ ದರ್ಗಾಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ತಮ್ಮ ನೇತೃತ್ವದಲ್ಲಿ ಗಂಧ ಲೇಪನ, ಚಾದರ ಹಾಕಲು ಅವಕಾಶ ನೀಡಬೇಕೆಂದು ಶಾಖಾದ್ರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡದೇ ಮುಜಾವರ್ ಮೂಲಕ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇದೆಯೇ ಹೊರತು ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿತು.
ದರ್ಗಾದ ಆವರಣದಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬೇಕೆಂದು ಶಾಖಾದ್ರಿ ಈ ವೇಳೆ ಪಟ್ಟು ಹಿಡಿದರು. ಆದರೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಉಲ್ಲೇಖಿಸಿ ಶಾಖಾದ್ರಿಗೆ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತು. ಈ ವೇಳೆ ದರ್ಗಾದ ಆವರಣದಲ್ಲಿರುವ ತಮ್ಮ ಕಚೇರಿ ಒಳಗೆ ನಡೆದ ಶಾಖಾದ್ರಿ ಅಲ್ಲಿಂದ ಹೊರಬರದೇ ಧಾರ್ಮಿಕ ಆಚರಣೆ, ಪೂಜೆಗೆ ತಮಗೆ ಅವಕಾಶ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಉರೂಸ್ ಆಚರಣೆ ಮಾಡದಿರಲು ತೀರ್ಮಾನಿಸಿದರು.
ಉಸ್ ಆವಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಸಂಖ್ಯೆಯಲ್ಲಿದ್ದ ಫಕೀರರು, ಸಾಧು, ಸಂತರು ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಹಾಗೂ ಭಕ್ತರು ನಿರಾಶೆಯಿಂದ ಗಿರಿಯಿಂದ ಹಿಂದಿರುಗಿದರು. ಜಿಲ್ಲಾಡಳಿತದ ನಡೆಗೆ ಅಸಮಾಧಾನವನ್ನೂ ವ್ಯಕ್ತಪಡಿಸಿ ಆವರಣದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸದೇ ಗುಹೆಯ ದರ್ಶನವನ್ನೂ ಮಾಡದೇ ಕೆಲ ಭಕ್ತರು ಹಿಂದಿರುಗಿದರೇ, ದೂರದಿಂದ ಆಗಮಿಸಿದ್ದವರು ಜಿಲ್ಲಾಡಳಿತದ ಸೂಚನೆಯಂತೆ ದರ್ಶನ ಪಡೆದು ಹಿಂದಿರುಗಿದರು. ಬಾಬಾ ಬುಡನ್ ದರ್ಗಾದಲ್ಲಿ ನಡೆಯುವ ಐತಿಹಾಸಿಕ ಉರೂಸ್ ಈ ಹಿಂದೆ ಮೂರು ದಿನಗಳ ಕಾಲ ಜರುಗುತ್ತಿದ್ದು, ವಿವಾದದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉರೂಸ್ ಆಚರಣೆಗೆ ಹಿನ್ನಡೆ ಉಂಟಾಗಿದೆ.
ಜಿಲ್ಲಾಧಿಕಾರಿ ರಮೇಶ್, ಎಸ್ಪಿ ಎಮ್.ಎಚ್.ಅಕ್ಷಯ್ ಸೇರಿದಂತೆ ಮುಜರಾಯಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಈ ವೇಳೆ ಸ್ಥಳದಲ್ಲಿ ಉಪಸ್ಥಿತರಿದ್ದರು.
.jpg)







