ಪರಶುರಾಮ ಥೀಂ ಪಾರ್ಕ್‍ಗೆ 1.50 ಕೋಟಿ ರೂ. ಬಿಡುಗಡೆ: ಸಚಿವ ಆನಂದ ಸಿಂಗ್

ಕಾರ್ಕಳ: ಬೈಲೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಂ ಪಾರ್ಕ್‍ಗೆ 1.50 ಕೋಟಿ ರೂ. ಬಿಡುಗಡೆಗೊಳಿಸುವುದಾಗಿ ರಾಜ್ಯ ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಅವರು ಕಾರ್ಕಳ ಉತ್ಸವದ ಪ್ರಯುಕ್ತ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಫುಲ ಅವಕಾಶವಿದೆ. ಇಲ್ಲಿನ ಪರಶುರಾಮ ಥೀಮ್ ಪಾರ್ಕನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲು 1.50 ಕೋಟಿ ರೂ.ವನ್ನು ಮುಂದಿನ 15 ದಿನಗಳೋಳಗಾಗಿ ಬಿಡುಗಡೆಗೊಳಿಸುತ್ತೇನೆ ಎಂದು ಭರವಸೆ ನೀಡಿದರು. ಮುಂದಿನ 2023ರಲ್ಲೂ ಸಚಿವ ವಿ.ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಈ ಉತ್ಸವ ನಡೆಯಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಈ ಕ್ಷೇತ್ರದ ಜನತೆ ನೀಡಬೇಕು ಎಂದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿವಿ ಕುಲಪತಿ ಎನ್. ವಿನಯ ಹೆಗ್ಡೆ ಮಾತನಾಡಿ, ಅಭಿವೃದ್ದಿಯ ಮೂಲಕ ವಿ.ಸುನಿಲ್ ಕುಮಾರ್ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣೀಕ್, ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮ ಕೇಶವ್, ಅರಣ್ಯ ಇಲಾಖಾಧಿಕಾರಿ ಮನೋಜ್ ಕುಮಾರ್, ಉದ್ಯಮಿ ಹುರ್ಲಾಡಿ ರಘುವೀರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳ, ಜಿಲ್ಲಾಧಿಕಾರಿ ಕೂರ್ಮರಾವ್, ಜಿ.ಪಂ.ಸಿಇಒ ಡಾ.ನವೀನ್ ಭಟ್ ವೈ, ಎಸ್‍ಪಿ ಎನ್.ವಿಷ್ಣುವರ್ದನ್, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಉಪಸ್ಥಿತರಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸುಕೇಶ್ ಹೆಗ್ಡೆ ಕಡ್ತಲ ಅವರನ್ನು ಅಭಿನಂದಿಸಲಾಯಿತು.
ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







