ಚಿಕ್ಕಮಗಳೂರು ಜಿಲ್ಲಾದ್ಯಂತ 5,802 ಅನರ್ಹ ಪಡಿತರಚೀಟಿ ರದ್ದು, 59.27 ಲಕ್ಷ ರೂ.ದಂಡ ವಸೂಲಿ: ಪಿ.ಆರ್.ಕೃಷ್ಣಮೂರ್ತಿ

ಪಿ.ಆರ್.ಕೃಷ್ಣಮೂರ್ತಿ
ಚಿಕ್ಕಮಗಳೂರು, ಮಾ.18: ಅಕ್ರಮವಾಗಿ ಅಂತ್ಯೋದಯ(ಎಎವೈ) ಹಾಗೂ ಬಿಪಿಎಲ್(ಪಿಎಚ್ಎಚ್) ಪಡಿತರಗಳನ್ನು ಹೊಂದುವ ಮೂಲಕ ಸರಕಾರಕ್ಕೆ ವಂಚಿಸುತ್ತಿದ್ದವರನ್ನು ಪತ್ತೆ ಹಚ್ಚಿ ಸುಮಾರು 59.27 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಪಿ.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅವರು, ರಾಜ್ಯ ಸರಕಾರ ಅಕ್ರಮವಾಗಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ಎಚ್ಚರಿಕೆ ನೀಡಿ ಇಂತಹ ಕಾರ್ಡುಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಿತ್ತು. ಅಲ್ಲದೇ ಕಾರ್ಡುಗಳನ್ನು ಹಿಂದಿರುಗಿಸದವರ ವಿರುದ್ಧ ದಂಢ ವಿಧಿಸುವ ಎಚ್ಚರಿಕೆಯನ್ನೂ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದ 3 ಮಂದಿ ಸ್ವಯಂಪ್ರೇರಿತವಾಗಿ ಪಡಿತರ ಚೀಟಿಯನ್ನು ಹಿಂದಿರುಗಿಸಿದ್ದರೇ, 48 ಮಂದಿ ಬಿಪಿಎಲ್ ಕಾರ್ಡುಗಳನ್ನು ಹಿಂದಿರುಗಿದ್ದಾರೆ. ಸರಕಾರದ ಮಾನದಂಢಗಳನ್ನು ಮೀರಿ ಅಕ್ರಮವಾಗಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದ ಒಟ್ಟು 51 ಮಂದಿ ಸರಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಇಲಾಖೆಗೆ ಕಾರ್ಡುಗಳನ್ನು ಹಿಂದಿರುಗಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದ 118 ಮಂದಿ ಅಂತ್ಯೋದಯ ಕಾರ್ಡುಗಳನ್ನು ಹಾಗೂ 1507 ಮಂದಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವುದನ್ನು ಪತ್ತೆ ಹಚ್ಚಲಾಗಿದೆ. ಆದಾಯ ತೆರಿಗೆ ಪಾವತಿಸುತ್ತಿದ್ದ ಒಟ್ಟು 1625 ಕುಟುಂಬಗಳಿಂದ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುಗಳನ್ನು ವಶಕ್ಕೆ ಪಡೆದು ದಂಢ ವಿದಿಸಲಾಗಿದೆ ಎಂದ ಅವರು, ಸರಕಾರಿ ನೌಕರಿಯಲ್ಲಿದ್ದೂ ಅಂತ್ಯೋದಯ ಕಾರ್ಡುಗಳನ್ನು ಹೊಂದಿದ್ದ 41 ಕಾರ್ಡುಗಳು ಹಾಗೂ ಸರಕಾರಿ ನೌಕರರ 445 ಬಿಪಿಎಲ್ ಕಾರ್ಡುಗಳೂ ಸೇರಿದಂತೆ ಸರಕಾರಿ ನೌಕರರು ಹೊಂದಿದ್ದ ಒಟ್ಟು 486 ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಿ ದಂಢ ವಿಧಿಸಲಾಗಿದೆ. ಈ ಕಾರ್ಡುಗಳ ಬದಲಿಗೆ ನೌಕರರಿಗೆ ಎಪಿಎಲ್ ಕಾರ್ಡುಗಳನ್ನು ನೀಡಲಾಗಿದೆ ಎಂದರು.
ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿದವರು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುಗಳನ್ನು ಹೊಂದುವಂತಿಲ್ಲ. ಆದರೆ ಜಿಲ್ಲೆಯಲ್ಲಿ 3 ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದರೂ ಅಂತ್ಯೋದಯ ಕಾರ್ಡುಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದ 113 ಮಂದಿ ಹಾಗೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದ 2168 ಕುಟುಂಬಗಳ ಕಾರ್ಡುಗಳನ್ನು ಪತ್ತೆ ಹಚ್ಚಿ, ಈ ಕುಟುಂಬಗಳು ಅಕ್ರಮವಾಗಿ ಹೊಂದಿದ್ದ ಅಂತ್ಯೋದಯ, ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.
1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುಗಳನ್ನು ಹೊಂದುವಂತಿಲ್ಲ. ಆದರೆ ವಾರ್ಷಿಕ ಆದಾಯ 1.20 ಲಕ್ಷಕ್ಕೂ ಹೆಚ್ಚಿದ್ದ ಕುಟುಂಬಗಳು ಅಂತ್ಯೋದಯ, ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದ ಪ್ರಕರಣಗಳನ್ನು ಪತ್ತೆಯಾಗಿವೆ. ಜಿಲ್ಲೆಯಲ್ಲಿ ವಾರ್ಷಿಕ ಆದಾಯ ಹೆಚ್ಚಿದ್ದರೂ ಅಂತ್ಯೋದಯ ಕಾರ್ಡುಗಳನ್ನು ಹೊಂದಿದ್ದ 41 ಕಾರ್ಡುಗಳು ಹಾಗೂ 714 ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗಿದೆ ಎಂದ ಅವರು, ಇಂತಹ ಕುಟುಂಬಗಳಿಗೆ ದಂಢ ವಿಧಿಸಿ ಕಾರ್ಡುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಉಳಿದಂತೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಅಕ್ರಮವಾಗಿ ಅಂತ್ಯೋದಯ ಕಾರ್ಡುಗಳನ್ನು ಹೊಂದಿದ್ದ 44 ಕಾರ್ಡುಗಳು ಹಾಗೂ 560 ಬಿಪಿಎಲ್ ಕಾರ್ಡುಗಳನ್ನು ಪತ್ತೆ ಮಾಡಿ ಈ ಕುಟುಂಬಗಳ ಕಾರ್ಡುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಅನರ್ಹ ಪಡಿತರ ಚೀಟಿದಾರರಿಂದ 1365452 ರೂ. ದಂಢ ವಸೂಲಿ ಮಾಡಿದ್ದರೇ, ಚಿಕ್ಕಮಗಳೂರು ಗ್ರಾಮಾಂತರ ಪ್ರದೇಶದ ಅನರ್ಹ ಪಡಿತರಚೀಟಿದಾರರಿಂದ 407890 ರೂ. ದಂಢ ವಸೂಲಿ ಮಾಡಲಾಗಿದೆ. ಕಡೂರು ತಾಲೂಕಿನಲ್ಲಿ 1330652 ರೂ., ಕೊಪ್ಪ ತಾಲೂಕಿನಲ್ಲಿ 425936 ರೂ., ಮೂಡಿಗೆರೆ ತಾಲೂಕಿನಲ್ಲಿ 1091632 ರೂ., ನರಸಿಂಹರಾಜಪುರ ತಾಲೂಕಿನಲ್ಲಿ 349350 ರೂ., ಶೃಂಗೇರಿ ತಾಲೂಕಿನಲ್ಲಿ 360507 ರೂ., ತರೀಕೆರೆ ತಾಲೂಕಿನಲ್ಲಿ 296607 ರೂ. ಹಾಗೂ ಅಜ್ಜಂಪುರ ತಾಲೂಕಿನಲ್ಲಿ 299001 ರೂ. ದಂಢವನ್ನು ಇಲಾಖಾಧಿಕಾರಿಗಳು ಸಂಗ್ರಹಿಸಲಾಗಿದೆ ಎಂದ ಅವರು, ಅಕ್ರಮ ಪಡಿತರ ಚೀಟಿ ಹೊಂದಿರುವವರ ಪತ್ತೆ ಕಾರ್ಯ ಇನ್ನೂ ಮುಂದುವರಿದಿದೆ ಎಂದರು.
ಅಕ್ರಮ ಪಡಿತರ ಚೀಟಿ ಹೊಂದಿದ್ದವರಿಂದ 59.27 ಲಕ್ಷ ರೂ. ದಂಢ ವಸೂಲಿ: ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಲು ಸರಕಾರ ಮಾನದಂಢಗಳನ್ನು ನಿಗದಿ ಮಾಡಿದೆ. ಈ ಮಾನದಂಢಗಳನ್ನು ಮೀರಿ ಜಿಲ್ಲಾದ್ಯಂತ ಅನರ್ಹ ಕುಟುಂಬಗಳು ಹೊಂದಿದ್ದ ಅಂತ್ಯೋದಯ, ಬಿಪಿಎಲ್ ಕಾರ್ಡುಗಳನ್ನು ಇಲಾಖೆ ರದ್ದುಪಡಿಸಿರುವುದಲ್ಲದೇ ಇಂತಹ ಅನರ್ಹ ಪಡಿತರ ಚೀಟಿದಾರರಿಂದ ಭಾರೀ ದಂಢವನ್ನು ವಸೂಲಿ ಮಾಡಲಾಗಿದೆ. ಸ್ವಯಂ ಪ್ರೇರಿತರಾಗಿ ಅಂತ್ಯೋದಯ, ಬಿಪಿಎಲ್ ಕಾರ್ಡುಗಳನ್ನು ಇಲಾಖೆಗೆ ಒಪ್ಪಿಸಿದವರಿಂದ ಒಟ್ಟು 27113 ರೂ. ದಂಢ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ ಮಾಡುತಿದ್ದರೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದ 1625 ಕುಟುಂಬಗಳಿಂದ 2423185 ರೂ. ದಂಢ ವಸೂಲಿ ಮಾಡಲಾಗಿದೆ. ಸರಕಾರಿ ನೌಕರರಾಗಿದ್ದರೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದ 486 ಅನರ್ಹರಿಂದ 3226893 ರೂ. ದಂಢ ವಸೂಲಿ ಮಾಡಲಾಗಿದೆ. ಇನ್ನು ಇಲಾಖಾಧಿಕಾರಿಗಳು ಪತ್ತೆ ಹಚ್ಚಿದ ಅನರ್ಹರಿಂದ 604 ಅನರ್ಹರಿಂದ 249836 ರೂ. ದಂಢ ವಸೂಲಿ ಮಾಡಲಾಗಿದೆ. ಒಟ್ಟಾರೆ ಜಿಲ್ಲಾದ್ಯಂತ 5802 ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಇಂತಹ ಅಕ್ರಮ ಕಾರ್ಡುದಾರರಿಂದ 59,27027 ರೂ. ದಂಡವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪಿಎಂಜಿಕೆವೈ ಪಡಿತರ ಮುಂದುವರಿಸಲು ಆದೇಶವಿಲ್ಲ: ಕೋವಿಡ್ ಹಿನ್ನೆಲ್ಲೆಯಲ್ಲಿ ಪ್ರಧಾನಮಂತ್ರಿ ಗರೀಬಿ ಕಲ್ಯಾಣ್ ಯೋಜನೆಯಡಿ ನೀಡಲಾಗುತ್ತಿದ್ದ ಪಡಿತರವನ್ನು ಮಾರ್ಚ್ವರೆಗೆ ಮಾತ್ರ ನೀಡಲು ಆದೇಶವಿದೆ. ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ಸರಕಾರದ ಯಾವುದೇ ಆದೇಶ ಬಂದಿಲ್ಲ.
- ಪಿ.ಆರ್.ಕೃಷ್ಣಮೂರ್ತಿ, ಉಪ ನಿರ್ದೇಶಕ, ಆಹಾರ ಇಲಾಖೆ
ಸೀಮೆಎಣ್ಣೆ ವಿತರಣೆ ಸ್ಥಗಿತ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಗತ್ಯ ಇದ್ದವರಿಗೆ 1 ಲೀ. ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಸದ್ಯ ಸೀಮೆಎಣ್ಣೆ ಪೂರೈಕೆದಾರರು ನಷ್ಟದ ಕಾರಣಕ್ಕೆ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದಾರೆ. ಪರಿಣಾಮ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗದದಲ್ಲಿ ವಿತರಣೆ ಮಾಡಲಾಗುತ್ತಿದ್ದ ಸೀಮೆಎಣ್ಣೆ ಪೂರೈಕೆಯನ್ನು ಸ್ಥಗಿತಗೊಂಡಿದೆ. ಈ ಸಂಬಂಧ ಸರಕಾರದ ಗಮನಸೆಳೆಯಲಾಗಿದೆ. ಕಡೂರು ಹಾಗೂ ತರೀಕೆರೆ ತಾಲೂಕುಗಳು ಈಗಾಗಲೇ ಸೀಮೆಎಣ್ಣೆ ಮುಕ್ತ ತಾಲೂಕುಗಳಾಗಿವೆ.
ಪಿ.ಆರ್.ಕೃಷ್ಣಮೂರ್ತಿ, ಉಪ ನಿರ್ದೇಶಕ, ಆಹಾರ ಇಲಾಖೆ








