ಮಲ ಹೊರುವ ಪದ್ಧತಿ ಇನ್ನೂ ಇದೆ, ನಾವಿಂದು ಸ್ವಚ್ಛ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ: ಬರಗೂರು ರಾಮಚಂದ್ರಪ್ಪ
''ಸರಕಾರಗಳು ಉಳ್ಳವರ ಮಾತು ಕೇಳಿ ಆಡಳಿತ ನಡೆಸುತ್ತಿವೆ''

ಸಾಹಿತಿ ಬರಗೂರು ರಾಮಚಂದ್ರಪ್ಪ
ದಾವಣಗೆರೆ.ಮಾ.18; ಸಾಮಾಜಿಕ, ಆರ್ಥಿಕ ಅಂತರ ಹೆಚ್ಚಾಗಿರುವ ಪ್ರಸ್ತುತ ದಿನಗಳಲ್ಲಿ ಶೋಷಿತರ ಒಗ್ಗಟ್ಟು ಅಗತ್ಯವಾಗಿ ಆಗಬೇಕಿದೆ ಹಿರಿಯ ಸಾಹಿತಿ, ಪ್ರಗತಿ ಪರ ಚಿಂತಕ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
'ನಾವಿಂದು ಪಂಚೇದ್ರಿಯ ವಂಚಿತ ಪ್ರಜಾಪ್ರಭುತ್ವ ಕಾಲದಲ್ಲಿ ಬದುಕುತ್ತಿದ್ದೇವೆ. ಅಂಬೇಡ್ಕರ್ ಅವರು 1949 ಸಂವಿಧಾನ ಸಭೆಯಲ್ಲಿ ಸಾಮಾಜಿಕ ಪ್ರಜಾ ಪ್ರಭುತ್ವ ಆರ್ಥಿಕ, ರಾಜಕೀಯ ಪ್ರಜಾಪ್ರಭುತ್ವ ಎಂದು ವಿಂಗಡಿಸಿದರು. ಇದರಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ ಮುಖ್ಯ ಎಂದು ಅಂಬೇಡ್ಕರ್ ತಿಳಿಸಿದ್ದರು.ಆದರೆ ನಮಗಿಂದು ರಾಜಕೀಯ ಸ್ವಾತಂತ್ರ್ಯ ಬಂದಿರಬಹುದು. ಆದರೆ ಸಾಮಾಜಿಕ ಸ್ವಾತಂತ್ರ್ಯ ಬಂದಿಲ್ಲ. ಇತ್ತೀಚಿನ ಕೆಲ ವರ್ಷಗಳ ಹಿಂದೆ ದೇಶದಲ್ಲಿ 1.88 ಕೋಟಿ ಜನ ಮಲ ಎತ್ತುತ್ತಿದ್ದಾರೆ. 8 ಕೋಟಿ ಗೂ ಅಧಿಕ ಜನ ಮಲವನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತಿದ್ದಾರೆ ಎಂದು ವರದಿಯೊಂದಿ ಹೇಳಿತ್ತು. ಆದರೆ ನಾವಿಂದು ಸ್ವಚ್ಛ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಈ ದೇಶದಲ್ಲಿ 5 ದಿನಕ್ಕೆ ಒಬ್ಬ ಪೌರ ಕಾರ್ಮಿಕ ಗುಂಡಿಯಲ್ಲಿ ಬಿದ್ದು ಸತ್ತುಹೋಗುತ್ತಿದ್ದಾರೆ. ಈ ರೀತಿ ಸತ್ತವರನ್ನು ಯಾವ ಪಕ್ಷಕ್ಕೆ ಸೇರಿದ ವ್ಯಕ್ತಿ ಎಂದು ಯೋಚನೆ ಮಾಡಲಾಗುತ್ತಿದೆ. ಇದು ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ' ಎಂದರು.
ದೇಶದಲ್ಲಿಂದು 45 ವರ್ಷಗಳಲ್ಲಿ ಇಲ್ಲದೇ ಇದ್ದಷ್ಟು ನಿರುದ್ಯೋಗ ಇದೆ. ಶೇ.72 ನಿರುದ್ಯೋಗ ಹೆಚ್ಚಾಗಿದೆ. ಕೊರೋನ ಸಂದರ್ಭದಲ್ಲಿ 1. ಕೋಟಿ 47 ಲಕ್ಷ ಜನರು ಕೆಲಸ ಕಳೆದುಕೊಂಡರು. ಆದರೆ ಈ ದೇಶದ ಕೊಟ್ಯಧಿಪತಿಗಳ ಸಂಪತ್ತು ಶೇ.35 ರಷ್ಟು ಹೆಚ್ಚಾಯಿತು. ಇಂಥಹ ಸಂದರ್ಭದಲ್ಲೂ ಕೊಟ್ಯಧಿಪತಿಗಳು ಸುಲಿಗೆ ಮಾಡಿದರೆ ಎಂದರೆ ಇದಕ್ಕೆ ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ. ಈ ಶ್ರೀಮಂತರ 13 ಲಕ್ಷ ಕೋಟಿ ಆದಾಯ ಹೆಚ್ಚಾಗುತ್ತದೆ ಈ ಪರಿಸ್ಥಿತಿ ನೊಡಿದರೆ 70-80 ದಶಕದ ಭಿನ್ನವಾದ ಸ್ಥಿತಿಯಲ್ಲಿ ನಾವಿದ್ಧೇವೆ. ಉದಾರೀಕರಣ ಉಳ್ಳವರ ಉದರೀಕರಣ ಅಂದರೆ ಉಳ್ಳವರ ಹೊಟ್ಟೆತುಂಬಿಸುವ ವ್ಯವಸ್ಥೇ ಅದು. ಇಂತಹ ಸಂರ್ಭದಲ್ಲಿ ದಲಿತ ಸಂಘಟನೆಗಳು ಚಿಂತನೆ ಮಾಡಬೇಕಿದೆ ನಾವು ಹೋಗುವ ದಿಕ್ಕು ಯಾವುದು ಎನ್ನುವುದನ್ನು ಚಿಂತಿಸಬೇಕಾಗಿದೆ ಎಂದರು.
ಇಂದು ಜಾತಿ ಮೂಲ, ಅರ್ಥ ಮೂಲ ಆರ್ಥಿಕ ಪ್ರಭುತ್ವ ಆಡಳಿತ ನಡೆಸುತ್ತಿದೆ. ಸರ್ಕಾರಗಳು ಉಳ್ಳವರ ಮಾತು ಕೇಳಿ ಆಡಳಿತ ನಡೆಸುತ್ತಿವೆ. ರಾಜಕಾರಣಕ್ಕೆ ದೇವರನ್ನು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ದೇಶದಲ್ಲಿ ಹೆಚ್ಚು ಶೋಷಣೆಗೆ ಒಳಗಾದವರು ಎಂದರೆ ಅದು ಅಸ್ಪøಶ್ಯರು. ಆದರೆ ಇದಕ್ಕಿಂತ ಹೆಚ್ಚು ಶೋಷಣೆಗೆ ಒಳಗಾಗಿರುವವರೆಂದರೆ ದೇವರು. ದೇವರನ್ನು ಎಲ್ಲರೂ ಹಿಡಿದು ಹಿಡಿದು ಹಾಕುತ್ತಿದ್ದಾರೆ. ಹೆಣ್ಣು ದೇವರನ್ನು ಹಿಡಿದುಕೊಂಡು ರಾಜಕಾರಣ ಮಾಡುತ್ತಿಲ್ಲ. ಆದರೆ ಓಟು ತಂದುಕೊಡಬಲ್ಲ ಗಂಡು ದೇವರ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇವರನ್ನು ಭಕ್ತಿಯನ್ನು ಭಾವಕ್ಕೆ ತರಬೇಕೆ ಹೊರತು ಬೀದಿಗೆ ತರಬಾರದು. ದೇವರ ಹೆಸರಿನಲ್ಲಿ ಧಾರ್ಮಿಕ ನೈತಿಕತೆಯನ್ನು ಹಾಳು ಮಾಡಲಾಗುತ್ತಿದೆ. ಕೃಷ್ಣಪ್ಪ ಹುಟ್ಟುಹಾಕಿದ ದಲಿತ ಹೋರಾಟದ ಸಂದರ್ಭವನ್ನು ಅದನ್ನು ಉಳಿಸಿಕೊಂಡು ದಲಿತ ಪ್ರಜ್ಞೆಯನ್ನು ಮರುನಿರೂಪಣೆ ಆಗಬೇಕಿದೆ ಅಂಥಹ ಸಂದರ್ಭದಲ್ಲಿ ಇಂದು ನಾವಿದ್ದೇವೆ ಎಂದರು.
900 ವಿವಿಗಳು ಡಿಜಿಟಲ್ ವಿವಿಗಳನ್ನಾಗಿ ಮಾಡಲಾಗುತಿದೆ ಎಂದರೆ ಜನ ಸಾಮಾನ್ಯರು ದಲಿತರ ಮಕ್ಕಳಿಗೆ ಅಲ್ಲಿ ಶಿಕ್ಷಣ ಕೊಡುವುದಿಲ್ಲ ಎಂದು ಅರ್ಥ. ಹೊಸ ಶಿಕ್ಷಣ ನೀತಿಯಲ್ಲಿ ಶೇ.40 ರಷ್ಟು ಆನ್ ಲೈನ್ನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರೆ ಬಡವರಿಂದ ಶಿಕ್ಷಣ ಕಿತ್ತುಕೊಳ್ಳಲಾಗುತಿದೆ ಎಂದು ಅರ್ಥ. ಇಂತಹ ಸನಿವೇಶದಲ್ಲಿ ನಾವಿದ್ದೇವೆ. ತಳ ಸಮುದಾಯಗಳು ಮೇಲೆ ಬರುವ ಸಂದರ್ಭದಲ್ಲಿ ಡಿಜಿಟಲ್ ಅನ್ನುವ ಕಾರಣಕ್ಕಾಗಿ ಬಡವರಿಂದ ಶಿಕ್ಷಣ ಕಿತ್ತುಕೊಳ್ಳಲಾಗುತ್ತಿದೆ. ಆಡಳಿತದಲ್ಲಿ ಡಿಜಿಟಲೀಕರಣ ಇರಲಿ. ಆದರೆ ಇದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿರೋಧಿಯಾದುದು ಎಂದರು.
ದಲಿತ ನಾಯಕತ್ವ ಪ್ರಬಲಗೊಳ್ಳಬೇಕು.ಹೆಚ್ಚು ಹಸಿವು ಅನುಭವಿಸಿದರು ಈ ದೇಶದ ನಾಯಕರಾಗಬೇಕು. ಇದಕ್ಕಾಗಿ ವಿಶಾಲವಾದ ಸಂಘಟನೆ ಮಾಡಬೇಕು. ದಲಿತಸಂಘಟನೆಗಳ ಮೂಲ ಅಸ್ತಿತ್ವ ಉಳಿಸಿಕೊಂಡೆ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡು ಹೊಸ ಸವಾಲುಗಳನ್ನು ಎದುರಿಸಬೇಕು ಎಂದು ಕರೆ ನೀಡಿದರು.
ದಲಿತ ಪ್ರಜ್ಞೆ ಇಂದು ಹೊಸ ಸವಾಲುಗಳಿಗೆ ಎದುರಾಗಿ ನಿಲ್ಲಬೇಕಿದೆ. ಈ ರೀತಿಯ ಹೊಸ ಸವಾಲುಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ದಲಿತ ಪ್ರಜ್ಞೆ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ದಲಿತ ಸಂಘಟನೆಗಳು ಅವರ ಅಸ್ತಿತ್ವ ಉಳಿಸಿಕೊಂಡು ಒಗ್ಗಟ್ಟಾಗಬೇಕಾದ ಅಗತ್ಯವಿದೆ.
ಸಾನಿಧ್ಯ ವಹಿಸಿದ್ದ ಚಿತ್ರದುರ್ಗ ಜಿಲ್ಲೆ ಕೋಡಿಹಳ್ಳಿಯ ಆದಿಜಾಂಭವ ಮಠದ ಷಡಕ್ಷರಿ ಮುನಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಪ್ರಸ್ತುತ ಕಾಲದ ಬದುಕಿಗೆ ಮತ್ತು ಭದ್ರತೆಗೆ ಸಂಘಟನೆ ಅಗತ್ಯ.ಈ ರೀತಿಯ ಹೋರಾಟ ಮಾಡದೇ ಹೋದರೆ ಆಧುನಿಕ ಕಾಲದಲ್ಲಿ ದಲಿತ ಸಮುದಾಯ ಕಳೆದು ಹೋಗುತ್ತದೆ. ಆದ್ದರಿಂದ ದಲಿತರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದರು.
ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಛಲವಾದಿ ಪೀಠದ ಬಸವ ನಾಗಿದೇವ ಸ್ವಾಮೀಜಿ, ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ,ಮುಂಡರಗಿ ನಾಗರಾಜ್, ಬಿ.ಎನ್.ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್, ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಸ್ವಾಗತಿಸಿದರು. ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಅನೇಕ ಮುಖಂಡರು ಭಾಗವಹಿಸಿದ್ದರು. ನಂತರ ವಿವಿಧ ಗೋಷ್ಟಿಗಳು ನಡೆದವು.








