ಕೀವ್ ಸೇರಿದಂತೆ ಉಕ್ರೇನ್ನ ಪ್ರಮುಖ ನಗರಗಳ ಮೇಲೆ ರಶ್ಯದ ಕ್ಷಿಪಣಿ ದಾಳಿ
ಉಕ್ರೇನ್ ಅಧ್ಯಕ್ಷಗೆ ನೋಬೆಲ್ ಶಾಂತಿ ಪ್ರಶಸ್ತಿ ನೀಡಲು ಯುರೋಪ್ ನಾಯಕರ ಆಗ್ರಹ

photo courtesy:twitter/@angelf94
ಲ್ವಿವ್,ಮಾ.18: ರಶ್ಯದ ಪಡೆಗಳು ಉಕ್ರೇನ್ನ ವಿವಿಧ ನಗರಗಳ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದು, ರಾಜಧಾನಿ ಕೀವ್ ಹಾಗೂ ಪಶ್ಚಿಮ ಭಾಗದ ನಗರವಾದ ಲ್ವಿವ್ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ರಶ್ಯ ಸೇನೆಯು ಶಾಲೆಗಳು, ಆಸ್ಪತ್ರೆಗಳು ಹಾಗೂ ಸತಿ ಪ್ರದೇಶಗಳನ್ನು ಗುರಿಯಿರಿಸಿ ಪದೇ ಪದೇ ದಾಳಿಗಳನ್ನು ನಡೆಸುತ್ತಿರುವ ಬಗ್ಗೆ ತನಿಖೆ ನಡೆಯಬೇಕೆಂದು ಜಾಗತಿಕ ನಾಯಕರು ಬಲವಾಗಿ ಆಗ್ರಹಿಸುತ್ತಿರುವ ಮಧ್ಯೆಯೇ ಈ ಕ್ಷಿಪಣಿ ದಾಳಿಗಳು ನಡೆದಿವೆ.
ಶುಕ್ರವಾರ ಮಂಜಾನೆ ನಡೆದ ಕ್ಷಿಪಣಿ ದಾಳಿಯ ಬಳಿಕ ಲ್ವಿವ್ ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಮೀಪದಲ್ಲಿರುವ ಸೇನಾ ವಿಮಾನಗಳ ದುರಸ್ತಿ ಕಾರ್ಯನಡೆಯುವ ಘಟಕದಲ್ಲಿ ದಟ್ಟವಾದ ಹೊಗೆ ಏಳುತ್ತಿರುವುದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.ದಾಳಿಗೆ ಮುಂಚಿತವಾಗಿಯೇ ಘಟಕವು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು ಎಂದು ಲ್ವಿವ್ ನಗರದ ಮೇಯರ್ ಆಂಡ್ರೆಯಿ ಸಡೋವಿಯಿ ತಿಳಿಸಿದ್ದಾರೆ.ಕಪ್ಪು ಸಮುದ್ರದಲ್ಲಿರುವ ಸಮರ ನೌಕೆಯ ಮೂಲಕ ಲ್ವಿವ್ ನಗರದ ಮೇಲೆ ರಶ್ಯ ಸೇನೆ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಆದರೆ ಆರು ಕ್ಷಿಪಣಿಗಳ ಪೈಕಿ ಎರಡನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆಯ ಪಶ್ಚಿಮ ಕಮಾಂಡ್ ತಿಳಿಸಿದ್ದಾರೆ.
ಪೊಲ್ಯಾಂಡ್ ಗಡಿಯ ಸನಿಹದಲ್ಲೇ ಲ್ವಿವ್ ನಗರದ ಆಸುಪಾಸಿನ ಪ್ರದೇಶಗಳ ಮೇಲೂ ರಶ್ಯವು ದಾಳಿಯನ್ನು ಮುಂದುವರಿಸಿದೆ. ಕಳೆದ ವಾರ ನಗರದ ಸಮೀಪದಲ್ಲಿರುವ ಸೇನಾ ತರಬೇತಿ ಘಟಕದ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 36 ಮಂದಿ ಸಾವನ್ನಪ್ಪಿದ್ದರು.
ರಶ್ಯ ಆಕ್ರಮಣದ ಹಿನ್ನೆಲೆಯಲ್ಲಿ ಉಕ್ರೇನ್ನ ವಿವಿಧ ನಗರಗಳಿಂದ ಜನರು ಲ್ವಿವ್ನಲ್ಲಿ ಆಶ್ರಯ ಪಡೆದಿದ್ದು, ಅಲ್ಲಿ ಜನಸಂಖ್ಯೆಯಲ್ಲಿ ಸುಮಾರು 2 ಲಕ್ಷದಷ್ಟು ಏರಿಕೆಯಾಗಿದೆ.
ಉಕ್ರೇನ್ ರಾಜಧಾನಿ ಕೀವ್ನ ವಾಣಿಜ್ಯ ಪ್ರದೇಶವಾದ ಪೊಡಿಲ್ ಎಂಬಲ್ಲಿ ರಶ್ಯ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಠ ಓರ್ವ ನಾಗರಿಕ ಮೃತಪಟ್ಟಿದ್ದಾನೆ. ಉತ್ತರ ಉಕ್ರೇನ್ನ ನಗರವಾದ ಚೆರ್ನಿಹಿವ್ನಲ್ಲಿ ಗುರುವಾರ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕನಿಷ್ಠ 12 ಮಂದಿಯ ಮೃತದೇಹಗಳನ್ನು ಶವಾಗಾರಕ್ಕೆ ತರಲಾಗಿದೆಯೆಂದು ವರದಿಗಳು ತಿಳಿಸಿವೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಶಾಂತಿ ನೊಬೆಲ್ ಪುರಸ್ಕಾರ ನೀಡಲು ಯುರೋಪ್ ನಾಯಕರ ಆಗ್ರಹ
ರಶ್ ಆಕ್ರಮಣದ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಈ ಸಾಲಿನ ಶಾಂತಿ ನೊಬೆಲ್ ಪುರಸ್ಕಾರಕ್ಕೆ ನಾಮಕರಣಗೊಳಿಸಬೇಕೆಂದು ಯುರೋಪ್ನ ಹಲವಾರು ಹಾಲಿ ಹಾಗೂ ಮಾಜಿ ರಾಜಕಾರಣಿಗಳು ಆಗ್ರಹಿಸಿದ್ದಾರೆ. ಅದಕ್ಕಾಗಿ ನೊಬೆಲ್ ನಾಮನಿರ್ದೇಶನ ಪ್ರಕ್ರಿಯೆಯನ್ನು ಮಾರ್ಚ್ 31ರವರೆಗೆ ತೆರೆದಿಡಬೇಕೆಂದು ಅವರು ಕರೆ ನೀಡಿದ್ದಾರೆ.
ಈ ವರ್ಷದ ನೊಬೆಲ್ ಪುರಸ್ಕಾರದ ಘೋಷಣೆಗಳು ಅಕ್ಟೋಬರ್ 3ರಿಂದ 10ರವರೆಗೆ ನಡೆಯಲಿವೆ. ಈವರೆಗೆ ಸುಮಾರು 251ಮಂದಿ ವ್ಯಕ್ತಿಗಳು ಹಾಗೂ 92 ಸಂಘಟನೆಗಳು 2022ರ ಸಾಲಿನ ನೊಬೆಲ್ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸಿವೆ.
An explosion was recorded in the center of #Kiev, #Ukraine Anton Herashchenko Deputy Minister of the Interior of Ukraine, noted that #Russia #attacked with ballistic missiles. What caused the explosion over the city, the debris fell on a residential area . pic.twitter.com/BThFWFxdVb
— Ni tan Angelito... (@angelf94) February 25, 2022







