ವಿಕಲಚೇತನರಿಗೆ ತ್ರಿಚಕ್ರ ವಾಹನ: ಹೆಚ್ಚಿನ ಅನುದಾನಕ್ಕೆ ಶಾಸಕರ ಆಗ್ರಹ

ಬೆಂಗಳೂರು, ಮಾ. 18: ‘ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ನೀಡದಿದ್ದರೆ ಅವರನ್ನು ಶಾಶ್ವತವಾಗಿ ದೈಹಿಕ ಅಸಮರ್ಥರನ್ನಾಗಿ ಮಾಡಿದಂತಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಅವರಿಗೆ ಹೆಚ್ಚಿನ ಅನುದಾನ ಒದಗಿಸಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಂದ ನೆರವು ಕೊಡಿಸಲು ಸರಕಾರ ಕ್ರಮ ವಹಿಸಬೇಕು' ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪಕ್ಷೇತರ ಸದಸ್ಯ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಸಚಿವ ಹಾಲಪ್ಪ ಆಚಾರ್ ನೀಡಿದ ಉತ್ತರಕ್ಕೆ ಆಕ್ಷೇಪಿಸಿದ ಅವರು, ‘ನಿಮ್ಮ ಅನುದಾನ ಲಭ್ಯತೆ ಕಡಿಮೆ ಇದೆ. ಆದರೆ, ಆ ವರ್ಗದ ಜನರ ಬೇಡಿಕೆ ಹೆಚ್ಚಿದೆ. ನನ್ನ ಕ್ಷೇತ್ರದಲ್ಲೂ ನೂರು ಮಂದಿ ಅಂಗವಿಕಲರ ಪಟ್ಟಿ ಸಿದ್ಧಪಡಿಸಿಕೊಂಡಿದ್ದೇನೆ. ಆದರೆ ಅನುದಾನ ಇಲ್ಲ. ಕಾರ್ಪೊರೇಟ್ ಸಂಸ್ಥೆಗಳನ್ನು ನಾವು ಸಂಪರ್ಕಿಸಿದರೆ ನೆರವು ಸಿಗುವುದು ಕಷ್ಟ. ಸರಕಾರವೇ ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ನೆರವು ಸಿಗಬಹುದು' ಎಂದು ಹೇಳಿದರು.
ಅನುದಾನದ ಭರವಸೆ: ‘ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲು ಹೆಚ್ಚಿನ ಅನುದಾನ ಒದಗಿಸಲಾಗುವುದು. ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 3,033 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಜತೆಗೆ ಶಾಸಕರ ನಿಧಿಯಿಂದಲೂ ತ್ರಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯ ನಡೆದಿದೆ' ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
‘2020-21ನೆ ಸಾಲಿನಲ್ಲಿ ಒಟ್ಟು 8 ಸಾವಿರ ಮಂದಿ ತ್ರಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸಿದ್ದು, ಅನುದಾನ ಲಭ್ಯತೆಯನ್ನು ಆಧರಿಸಿ ಕೇವಲ 1,467 ಜನರಿಗೆ ಮಾತ್ರ ವಾಹನ ವಿತರಣೆ ಮಾಡಲಾಗಿದೆ. ವಿಕಲಚೇತನರ ತ್ರಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ ಸಿಎಸ್‍ಆರ್ ನಿಧಿಯಡಿ ತ್ರಿಚಕ್ರ ವಾಹನಗಳನ್ನು ವಿತರಿಸಲು ಪ್ರಯತ್ನ ಮಾಡುವುದು' ಎಂದು ಅವರು ಹೇಳಿದರು.
ಆರಂಭಕ್ಕೆ ಮಾತನಾಡಿದ ಶರತ್ ಬಚ್ಚೇಗೌಡ, ‘ವಿಕಲಚೇತನರ ತ್ರಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಹೆಚ್ಚಿನ ಅನುದಾನ ಒದಗಿಸಿ, ಹೊಸಕೇಟೆ ಕ್ಷೇತ್ರದಲ್ಲಿ 1,800 ದೈಹಿಕ ವಿಕಲಚೇತನರಿದ್ದಾರೆ. ಇವರಿಗೆಲ್ಲ ತ್ರಿಚಕ್ರ ವಾಹನ ನೀಡಬೇಕು. ಜೊತೆಗೆ ಅವರಿಗೆ ನೀಡುತ್ತಿರುವ ಮಾಸಾಶನ ಮೊತ್ತವನ್ನು ಹೆಚ್ಚಳ ಮಾಡಬೇಕು' ಎಂದು ಆಗ್ರಹಿಸಿದರು. ‘ಈ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು' ಎಂದು ಹಾಲಪ್ಪ ಆಚಾರ್ ತಿಳಿಸಿದರು.







