ಬೆಂಗಳೂರು: ವಿವಾದಿತ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮಾ.21ರಿಂದ ಮೂರು ದಿನಗಳ ಬಹಿರಂಗ ಅಧಿವೇಶನಕ್ಕೆ ಕರೆ
ಬೆಂಗಳೂರು, ಮಾ.18: ರಾಜ್ಯ ಸರಕಾರವು ಜಾರಿಗೊಳಿಸಿರುವ ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ, ಮಾ.21 ರಿಂದ 23ರವರೆಗೆ ಜನಪರ ಬಹಿರಂಗ ಅಧಿವೇಶನವನ್ನು ನಗರದ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಯೋಜಕ ಬಿ.ಸಿ. ಬಯ್ಯಾರೆಡ್ಡಿ ಕರೆ ನೀಡಿದರು.
ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಕರ್ನಾಟಕ ಭೂ ಸುಧಾರಣಾ(ತಿದ್ದುಪಡಿ) ಕಾಯಿದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ನಿಯಂತ್ರಣ ಅಭಿವೃದ್ಧಿ) ಕಾಯಿದೆ 2020 ಹಾಗೂ ಕರ್ನಾಟಕ ಜಾನುವಾರು ಹತ್ಯಾ(ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆ 2020 ಅನ್ನು ಜಾರಿಗೊಳಿಸಿದ್ದು, ಈ ಕಾಯ್ದೆಗಳು ರೈತರಿಗೆ ಮಾರಕವಾಗಿದೆ. ಕಾಯ್ದೆಗಳನ್ನು ಅನುಷ್ಠಾನಗೊಳಿಸಿ ಕೃಷಿಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಹುನ್ನಾರ ಅಡಗಿದೆ. ಹಾಗಾಗಿ ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಪರ್ಯಾಯ ಅಧಿವೇಶನದಲ್ಲಿ ಮೂರು ವಿವಾದಿತ ಕಾಯ್ದೆಗಳ ಕುರಿತು ತಜ್ಞರು ವಿಮರ್ಶೆ ಮಾಡುತ್ತಾರೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅಧಿವೇಶನದಲ್ಲಿ ರೈತರು, ದಲಿತರು, ಕಾರ್ಮಿಕರು ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಎಸ್. ವರಲಕ್ಷ್ಮಿ, ದೇವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







