ಢಾಕಾ: ಇಸ್ಕಾನ್ ದೇಗುಲದಲ್ಲಿ ದುಷ್ಕರ್ಮಿಗಳ ದಾಂಧಲೆ

photo courtesy:twitter
ಢಾಕಾ,ಮಾ.18: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಗುರುವಾರ 200 ಮಂದಿ ದುಷ್ಕರ್ಮಿಗಳ ಗುಂಪೊಂದು ಇಸ್ಕಾನ್ ಪಂಥಕ್ಕೆ ಸೇರಿದ ರಾಧಾಕೃಷ್ಣ ದೇವಾಲಯದ ಮೇಲೆ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
‘‘ಗುರುವಾರ ಇಸ್ಕಾನ್ ನ ರಾಧಾಕೃಷ್ಣ ದೇವಾಲಯದಲ್ಲಿ ‘ಗೌರ ಪೂರ್ಣಿಮಾ’ ಹಬ್ಬದ ಆಚರಣೆಗೆ ಭಕ್ತಾದಿಗಳು ಸಿದ್ಧತೆ ನಡೆಸುತ್ತಿದ್ದರು. ಆಗ 200ರಷ್ಟಿದ್ದ ಗುಂಪೊಂದು ದೇವಾಲಯದ ಆವರಣವನ್ನು ಪ್ರವೇಶಿಸಿ,ಸೊತ್ತುಗಳನ್ನು ಧ್ವಂಸಗೊಳಿಸತೊಡಗಿತು’’ ಎಂದು ಇಸ್ಕಾನ್ ಪಂಥದ ಉಪಾಧ್ಯಕ್ಷ ರಾಧಾರಮಣ ದಾಸ್ ತಿಳಿಸಿದ್ದಾರೆ.
ಆಗ ನಡೆದ ಘರ್ಷಣೆಯಲ್ಲಿ ಇಸ್ಕಾನ್ನ ಏಳು ಮಂದಿ ಭಕ್ತಾದಿಗಳು ಗಾಯಗೊಂಡರು. ಈ ಸಂದರ್ಭದಲ್ಲಿ ಭಕ್ತಾದಿಗಳು ಪೊಲೀಸರಿಗೆ ಕರೆ ಮಾಡಿದರು. ಬಳಿಕ ಅಲ್ಲಿಗೆ ಪೊಲೀಸರು ಧಾವಿಸಿ ಬಂದು ದೇವಾಲಯದ ಆವರಣದಿಂದ ದುಷ್ಕರ್ಮಿಗಳನ್ನು ಹೊರದಬ್ಬುವಲ್ಲಿ ಯಶಸ್ವಿಯಾದರು’’ ಎಂದು ಅವರು ಹೇಳಿದ್ದಾರೆ.
ಇಸ್ಕಾನ್ ದೇವಾಲಯದ ಮೇಲೆ ನಡೆದ ದಾಳಿಯ ಬಗ್ಗೆ ರಾಧಾರಮಣ್ ದಾಸ್ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಘಟನೆಗೆ ಸಂಬಂಧಿಸಿ ಬಾಂಗ್ಲಾ ಸರಕಾರವು ಕಠಿಣ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಹಿಂದೂ ಅಲ್ಪಸಂಖ್ಯಾತರಿಗೆ ಭದ್ರತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.ಕಳೆದ ವರ್ಷದ ಆಕ್ಟೋಬರ್ನಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲೆ ಸರಣಿ ದಾಳಿಗಳು ನಡೆದ ಘಟನೆಯ ಬಳಿಕ ಮತ್ತೆ ಅಂತಹ ಕೃತ್ಯಗಳು ಮರುಕಳಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.





