ರಾಜ್ಯದಲ್ಲಿ ಕೋವಿಡ್‍ಗಾಗಿ 15 ಸಾವಿರ ಕೋಟಿ ರೂ. ಖರ್ಚು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.18: ರಾಜ್ಯದಲ್ಲಿ ಕೋವಿಡ್ ಸೋಂಕಿಗಾಗಿ 15,645 ಕೋಟಿ ರೂ. ಗಳನ್ನು ರಾಜ್ಯ ಸರಕಾರ ಖರ್ಚು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಮೊದಲ ಕೋವಿಡ್ ಅಲೆಯಲ್ಲಿ ವಿಶೇಷ ಪ್ಯಾಕೇಜ್‍ಗಾಗಿ 4,640 ಕೋಟಿ ರೂ. 2ನೆ ಪ್ಯಾಕೇಜ್ ನಲ್ಲಿ 2,658 ಕೋಟಿ ರೂ. ಖರ್ಚು ಮಾಡಲಾಗಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕಾಗಿ 2,525 ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ 15 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2022-23ನೆ ಸಾಲಿನ ಮುಂಗಡ ಪತ್ರದ ಮೇಲೆ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಅವರು, ಕೋವಿಡ್ ಸೋಂಕು ನಿರ್ವಹಣೆಗೆ ರಾಜ್ಯ ಸರಕಾರ ಹಣವನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿಯ ಇತಿಮಿತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ್ದು, ಕೋವಿಡ್ ಮುನ್ನ ಮತ್ತು ನಂತರದ ಆರ್ಥಿಕ ಸ್ಥಿತಿ ಬೇರೆಬೇರೆಯಾಗಿದೆ. ಅದರ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ರಾಜ್ಯಾದ್ಯಂತ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದ ಅವರು, ರಾಜ್ಯದಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಇವುಗಳಿಗೆ ಕುಲಪತಿ, ಕುಲಸಚಿವರನ್ನು ನೇಮಕ ಮಾಡುವ ಬದಲು ಖಾಲಿ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಡಿಜಿಟಲ್ ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸುವ ಸಲುವಾಗಿ 8, 9, 10ನೆ ತರಗತಿಯ ಸರಕಾರಿ ಶಾಲಾ ಮಕ್ಕಳಿಗೂ ಈ ಯೋಜನೆ ವಿಸ್ತರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.







