ಉಕ್ರೇನ್ ಗೆ ವಾಯುರಕ್ಷಣಾ ವ್ಯವಸ್ಥೆ ಒದಗಿಸಲು ಅವಕಾಶ ನೀಡಲಾರೆ: ಸ್ಲೋವೆನಿಯಾಗೆ ರಶ್ಯ ಎಚ್ಚರಿಕೆ

ಕೀವ್,ಮಾ.18: ರಶ್ಯದ ಆಕ್ರಮಣಕ್ಕೊಳಗಾಗಿರುವ ಉಕ್ರೇನ್ಗೆ ವಾಯುಪ್ರದೇಶ ರಕ್ಷಣಾ ವ್ಯವಸ್ಥೆಯನ್ನು ಒದಗಿಸಲು ತಾನು ಇಚ್ಛಿಸುವುದಾಗಿ ಸ್ಲೋವಾಕಿಯಾ ಶುಕ್ರವಾರ ಘೋಷಿಸಿದೆ. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ರಶ್ಯನ್ ವಿದೇಶಾಂಗ ಸಚಿವ ಸೆರ್ಗಿಯಿ ಲಾವ್ರೊವ್ ಅವರು ಉಕ್ರೇನ್ಗೆ ಎಸ್-300 ವಾಯು ರಕ್ಷಣಾ ವ್ಯವಸ್ಥೆಯ ವರ್ಗಾವಣೆಗೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಅಮೆರಿಕ ಮೂಲದ ಉಪಗ್ರಹ ಉತ್ಪಾದಕ ಸಂಸ್ಥೆ ಟೆರ್ರಾನ್ ಒರ್ಬಿಟಾಲ್ ತಾನು ಉಕ್ರೇನ್ಗೆ ನಿರ್ಣಾಯಾತ್ಮಕ ವ್ಯೆಹಾತ್ಮಕ ನೆರವನ್ನು ಒದಗಿಸುವುದಾಗಿ ಘೋಷಿಸಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ರಶ್ಯನ್ ಪಡೆಗಳ ಚಲನವಲನಗಳ ಬಗ್ಗೆ ಮಹತ್ವದ ದತ್ತಾಂಶಗಳನ್ನು ಹಾಗೂ ಛಾಯಾಚಿತ್ರಗಳನ್ನು ಹಂಚಿಕೊಳ್ಳಲಿದೆಯೆಂದು ಉಕ್ರೇನ್ನ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಟೆರ್ರಾನ್ ಓರ್ಬಿಟಾಲ್ ಉಪಗ್ರಹ ಉತ್ಪಾದಕ ಸಂಸ್ಥೆಯು ಒದಗಿಸುವ ಮಹತ್ವದ ಮಾಹಿತಿಗಳು ನಮ್ಮ ದೇಶವನ್ನು ರಶ್ಯದ ಆಕ್ರಮಣ ಹಾಗೂ ಭಯೋತ್ಪಾದನೆಯಿಂದ ರಕ್ಷಿಸಲು ನೆರವಾಗಲಿದೆ ಎಂದು ಉಕ್ರೇನ್ನ ರಕ್ಷಣಾ ಸಚಿವಾಲಯವು ಟ್ವೀಟ್ ಮಾಡಿದೆ.
ಉಕ್ರೇನ್ಗೆ ಬೆಂಬಲ ಪುನರುಚ್ಚರಿಸಿದ ಇ.ಯು.ಆಯೋಗ ಉಕ್ರೇನ್ನಲ್ಲಿ ಯುದ್ಧ ಮುಂದುವರಿದಿರುವಂತೆಯೇ ಯುರೋಪ್ ಒಕ್ಕೂಟ ಆಯೋದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲಿಯೆನ್ ಅವರು ರಶ್ಯದ ಆಕ್ರಮಣದ ವಿರುದ್ಧ ಉಕ್ರೇನ್ಗೆ ಬೆಂಬಲ ನೀಡುವಲ್ಲಿ ಯುರೋಪ್ ಒಕ್ಕೂಟದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಮಾಡಿದ ವಿಡಿಯೋ ಕರೆಯೊಂದರಲ್ಲಿ ವೊನ್ ಡೆರ್ ಲಿಯೆನ್ ಅವರು ಉಕ್ರೇನ್ಗೆ ಯುರೋಪ್ ಒಕ್ಕೂಟದ ‘ಅಚಲ ಬೆಂಬಲ’ವನ್ನು ಘೋಷಿಸಿದರು. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಯುರೋಪ್ ಒಕ್ಕೂಟದ ರಾಷ್ಟ್ರಗಳು ಆಶ್ರಯ ಕೋರಿ ಬಂದ ಉಕ್ರೇನ್ ನಿರಾಶ್ರಿತರಿಗೆ ನೆರವಾಗುತ್ತಿರುವುದನ್ನು ಕೂಡಾ ವೊನ್ ಡೆರ್ ಅವರು ಪ್ರಶಂಸಿಸಿದರು.







