ವಿಶ್ವದ ಸಂತುಷ್ಟ ದೇಶ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 136ನೇ ಸ್ಥಾನ

ಫಿನ್ಲೆಂಡ್
ಹಲ್ಸಿಂಕಿ: ಸತತ ಐದನೇ ವರ್ಷ ವಿಶ್ವದ ಅತಿ ಸಂತಸದ ದೇಶ ಎಂಬ ಹೆಗ್ಗಳಿಗೆ ಫಿನ್ಲೆಂಡ್ ಪಾತ್ರವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಅಫ್ಘಾನಿಸ್ತಾನ ಹಾಗೂ ಲೆಬನಾನ್ ಅತಿ ಕಡಿಮೆ ಸಂತೋಷ ಇರುವ ದೇಶಗಳು ಎನಿಸಿಕೊಂಡಿವೆ.
ವಿಶ್ವಸಂಸ್ಥೆ ಪ್ರಾಯೋಜಿತ ಸೂಚ್ಯಂಕದಲ್ಲಿ ಭಾರತ 136ನೇ ಸ್ಥಾನದಲ್ಲಿದ್ದು, ನೆರೆಯ ದೇಶವಾದ ಪಾಕಿಸ್ತಾನ (121)ಕ್ಕಿಂತಲೂ ಕೆಳಗಿದೆ.
ಉಕ್ರೇನ್ ಮೇಲೆ ರಷ್ಯಾ ಅತಿಕ್ರಮಣ ನಡೆಸುವ ಮುನ್ನ ಈ ಪಟ್ಟಿ ತಯಾರಿಸಲಾಗಿದೆ. ಜನ ಕಲ್ಯಾಣದಲ್ಲಿ ಬಲ್ಗೇರಿಯಾ, ರೊಮೇನಿಯಾ ಮತ್ತು ಸೆರ್ಬಿಯಾ ಗಣನೀಯ ಸಾಧನೆ ಮಾಡಿವೆ. ಶುಕ್ರವಾರ ಬಿಡುಗಡೆ ಮಾಡಿರುವ ಸಂತೋಷ ಪಟ್ಟಿಯಲ್ಲಿ ತೀರಾ ಕುಸಿತ ಕಂಡಿರುವ ದೇಶಗಳೆಂದರೆ ಲೆಬನಾನ್, ವೆನೆಜುವೆಲ್ಲಾ ಮತ್ತು ಅಫ್ಘಾನಿಸ್ತಾನ.
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಲೆಬಬಾನ್, ಸಂತೋಷ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಜಿಂಬಾಬ್ವೆ ಕೊನೆಯಿಂದ ಮೂರನೇ ಸ್ಥಾನದಲ್ಲಿದೆ. ಯುದ್ಧಭೀತಿಯ ಅಫ್ಘಾನಿಸ್ತಾನ ಕಳೆದ ವರ್ಷವೇ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಇಲ್ಲಿ ಮಾನವೀಯ ಸಂಕಷ್ಟಗಳು ಮತ್ತಷ್ಟು ಉಲ್ಬಣಿಸಿವೆ.
"ಹಲವಾರು ಮಂದಿ ಸಂತ್ರಸ್ತರಿಗೆ ಯುದ್ಧದಿಂದ ಆಗಿರುವ ಭೌತಿಕ ಮತ್ತು ಅಭೌತಿಕ ಹಾನಿಯನ್ನು ಇದು ನೆನಪಿಸುತ್ತದೆ ಎಂದು ವರದಿ ಸಿದ್ಧಪಡಿಸಿದ ಜಾನ್ ಇಮ್ಯಾನ್ಯುಯಲ್ ಡೇ ನೆವೆ ಹೇಳಿದ್ದಾರೆ. ಜನರು ತಮ್ಮ ಸಂತಸವನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುವುದು ಮತ್ತು ಆರ್ಥಿಕ ಹಾಗೂ ಸಾಮಾಜಿಕ ಅಂಕಿ ಅಂಶಗಳ ಆಧಾರದಲ್ಲಿ ಕಳೆದ 10 ವರ್ಷಗಳಿಂದ ವಲ್ಡ್ ಹ್ಯಾಪಿನೆಸ್ ರಿಪೋರ್ಟ್ ತಯಾರಿಸಲಾಗುತ್ತದೆ.
ಉತ್ತರ ಅಮೆರಿಕ ದೇಶಗಳು ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿವೆ. ಫಿನ್ಲೆಂಡ್ ಬಳಿಕ ಐಸ್ಲ್ಯಾಂಡ್, ಸ್ವಿಡ್ಝರ್ಲೆಂಡ್ ಮತ್ತು ಹಾಲೆಂಡ್ ನಂತರದ ಸ್ಥಾನಗಳಲ್ಲಿವೆ. ಅಮೆರಿಕ 16ನೇ ಸ್ಥಾನಕ್ಕೆ ಏರಿದ್ದು, ಬ್ರಿಟನ್ ಗಿಂತ ಮುಂದಿದೆ. ಫ್ರಾನ್ಸ್ 20 ನೇ ಸ್ಥಾನದಲ್ಲಿದ್ದು, ಇದು ದೇಶದ ಗರಿಷ್ಠ ರ್ಯಾಂಕಿಂಗ್ ಆಗಿದೆ.







