ಬೈಡನ್ ಜೊತೆ ವರ್ಚುವಲ್ ಮಾತುಕತೆ; "ಯುದ್ಧ ಯಾರ ಹಿತಾಸಕ್ತಿಗೂ ಒಳಿತಲ್ಲ" ಎಂದ ಚೀನಾ ಅಧ್ಯಕ್ಷ

ಕ್ಸಿಜಿನ್ ಪಿಂಗ್
ವಾಶಿಂಗ್ಟನ್: ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಬಗ್ಗೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವ ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್, ‘ಯುದ್ಧವು ಯಾರ ಹಿತಾಸಕ್ತಿ ಗೂ ಒಳಿತಲ್ಲ’ವೆಂದು ಹೇಳಿದ್ದಾರೆ.
ಬೈಡೆನ್ ಹಾಗೂ ಕ್ಸಿಜಿನ್ ಪಿಂಗ್ ಸುಮಾರು 1:50 ಗಂಟೆ ಮಾತುಕತೆ ನಡೆಸಿದರೆಂದು ಶ್ವೇತಭವನದ ಮೂಲಗಳು ತಿಳಿಸಿವೆ. ದೇಶ-ದೇಶಗಳ ನಡುವಿನ ಬಾಂಧವ್ಯಗಳು ಸೇನಾ ಸಂಘರ್ಷದ ಹಂತಕ್ಕೆ ತಲುಪಕೂಡದು ಎಂಬ ಭಾವನೆಯನ್ನು ಚೀನಾ ಹೊಂದಿರುವುದಾಗಿ ಕ್ಸಿ ಹೇಳಿರುವುದಾಗಿ ಅಮೆರಿಕದ ಸುದ್ದಿವಾಹಿನಿ ಸಿಸಿಟಿವಿ ವರದಿ ಮಾಡಿದೆ.
ಉಕ್ರೇನ್ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಹಾಗೂ ಚೀನಾ ದೇಶಗಳು ಅಂತಾರಾಷ್ಟ್ರೀಯ ಹೊಣೆಗಾರಿಕೆಗೆ ಹೆಗಲುಗೊಡಬೇಕೆಂದು ಕ್ಸಿ ಹೇಳಿರುವುದಾಗಿ ವರದಿ ತಿಳಿಸಿದೆ. ಶಾಂತಿ ಹಾಗೂ ಭದ್ರತೆಯು ಅಂತಾರಾಷ್ಟ್ರೀಯ ಸಮುದಾಯದ ಅಮೂಲ್ಯವಾದ ನಿಧಿಯೆಂದು ಅವರು ಅಭಿಪ್ರಾಯಿಸಿದರು.
ಆದರೆ ಉಕ್ರೇನ್ ವಿರುದ್ಧ ರಶ್ಯದ ಆಕ್ರಮಣಕ್ಕೆ ಸಂಬಂಧಿಸಿ ಕ್ಸಿ ಅವರು ರಶ್ಯ ಅಧ್ಯಕ್ಷ ಪುಟಿನ್ ವಿರುದ್ಧ ನೇರವಾಗಿ ಟೀಕೆ ಮಾಡಿದ್ದಾರೆಯೇ ಅಥವಾ ಯುದ್ಧವನ್ನು ನಿಲ್ಲಿಸಲು ರಶ್ಯದ ಮೇಲೆ ಒತ್ತಡ ಹೇರುವ ಅಮೆರಿಕ ನೇತೃತ್ವದ ಅಭಿಯಾನಕ್ಕೆ ನೆರವು ನೀಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆಯೇಎಂಬುದು ಇನ್ನೂ ಸ್ಪಷ್ಟವಾಗಿಲ್ಲವೆಂದು ಸಿಸಿಟಿವಿ ವರದಿ ತಿಳಿಸಿದೆ.
ಉಕ್ರೇನ್ ಮೇಲೆ ರಶ್ಯದ ಆಕ್ರಮಣವನ್ನು ಖಂಡಿಸುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಜೊತೆ ಕೈಜೋಡಿಸುವಂತೆ ಚೀನಾದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಜೋ ಬೈಡೆನ್ ಅವರು ಕ್ಸಿಜಿನ್ ಪಿಂಗ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು.







