ಪುತ್ತೂರು: ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳಕ್ಕೆ ಚಾಲನೆ

ಪುತ್ತೂರು : ಶ್ರಿ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 29ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಂಬಳವು ಸಾಹಸದ ಗ್ರಾಮೀಣ ಕ್ರೀಡೆಯಾಗಿದ್ದು, ಕಂಬಳದಿಂದ ಮನೋಸ್ಥೈರ್ಯ, ಬಾಹುಬಲ ಮತ್ತು ಮನೋಬಲ ವೃದ್ಧಿಸುತ್ತದೆ. ಕಂಬಳ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆ ಗುರುತಿಸುವಂತಾಗಲಿ ಎಂದರು.
ಪುತ್ತೂರು ಮಾಯ್ದೇ ದೇವುಸ್ ಚರ್ಚ್‍ನ ಧರ್ಮಗುರು ರೆ.ಫಾ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ಕಂಬಳ ಕ್ರೀಡೆಯು ದೇಶ, ಭಾಷೆ ಮತ್ತು ಸಂಸ್ಕೃತಿಯನ್ನು ಒಂದುಗೂಡಿಸುತ್ತದೆ. ಇದರ ಜೊತೆಗೆ ಅವೆಲ್ಲವನ್ನೂ ಮೀರಿದ ಮನುಷ್ಯತ್ವವನ್ನು ಬಿಂಬಿಸುತ್ತದೆ. ಎಲ್ಲಾ ಎಲ್ಲೆಗಳನ್ನು ಮೀರಿ ಕಂಬಳ ನಮ್ಮೆಲ್ಲರನ್ನೂ ಒಂದಾಗುವಂತೆ ಮಾಡುತ್ತಿದೆ ಎಂದರು.
ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸುಧಾನ ದೇವಾಲಯದ ಧರ್ಮಗುರು ರೆ. ವಿಜಯ ಹಾರ್ವಿನ್, ಪುತ್ತೂರು ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕಂಬಳ ಸಮಿತಿ ಸಂಚಾಲಕ ಎನ್ ಸುಧಾಕರ ಶೆಟ್ಟಿ, ಸುದ್ದಿ ಸಮೂಹ ಸಂಸ್ಥೆಗಳ ಸಂಚಾಲಕ ಡಾ. ಯು.ಪಿ. ಶಿವಾನಂದ, ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಕರುಣಾಕರ ಸುವರ್ಣ, ಡಾ. ಪ್ರಸನ್ನ ಹೆಬ್ಬಾರ್, ಗುಣಪಾಲ ಕಡಂಬ, ಚೆನ್ನಪ್ಪ ರೈ ದೇರ್ಲ, ಉಲ್ಲಾಸ್ ಕೋಟ್ಯಾನ್, ಸಂಜೀವ ಪೂಜಾರಿ, ಸತೀಶ್ ಕುಮಾರ್ ಕಡೆಂಜಿ, ಶೇಖರ ನಾರಾವಿ, ರವೀಂದ್ರ ರೈ ಬಳ್ಳಮಜಲು, ಸುಧೀರ್ ಶೆಟ್ಟಿ ನೇಸರ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಮೇಶ್ ಶೆಣೈ, ಸಂಕಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ. ಸೀತಾರಾಮ ರೈ ಸವಣೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷರಾದ ವಸಂತ ಕುಮಾರ್ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.
