ಶಿಕ್ಷಣದ ಕೇಸರೀಕರಣ ಎಂದು ಆರೋಪಿಸಲಾಗುತ್ತಿದೆ, ಕೇಸರಿಯಲ್ಲೇನು ತಪ್ಪಿದೆ?: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (File Photo: PTI)
ಹರಿದ್ವಾರ್: ದೇಶದ ಜನರು ತಮ್ಮ 'ವಸಾಹತುಶಾಲಿ ಮನೋಸ್ಥಿತಿ'ಯನ್ನು ಕೈಬಿಟ್ಟು ತಮ್ಮ ಅಸ್ಮಿತೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಹರಿದ್ವಾರದ ದೇವ್ ಸಂಸ್ಕೃತಿ ವಿಶ್ವ ವಿದ್ಯಾಲಯ ಇದರ ಸೌತ್ ಏಷ್ಯಾ ಇನ್ಸ್ಟಿಟ್ಯೂಟ್ ಆಫ್ ಪೀಸ್ ಎಂಡ್ ರಿಕನ್ಸಿಲಿಯೇಶನ್ ಉದ್ಘಾಟಿಸಿ ಇಂದು ಮಾತನಾಡಿದ ಅವರು "ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂಬ ಆರೋಪ ಹೊರಿಸಲಾಗುತ್ತಿದೆ, ಅಷ್ಟಕ್ಕೂ ಕೇಸರಿಯಲ್ಲಿ ಏನು ಸಮಸ್ಯೆಯಿದೆ? ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಸರ್ವೇ ಭವಂತು ಸುಖಿನಾಹ್ ಮತ್ತು ವಸುದೈವ ಕುಟುಂಬಕಂ ಸಿದ್ಧಾಂತಗಳ ಬಗ್ಗೆ ಹೇಳಲಾಗಿದೆ, ಇವುಗಳೇ ಇಂದಿಗೂ ನಮ್ಮ ವಿದೇಶಾಂಗ ನೀತಿಗಳ ಮಾರ್ಗದರ್ಶಿ ತತ್ವಗಳಾಗಿವೆ,'' ಎಂದು ಅವರು ಹೇಳಿದರು.
"ನಾವು ನಮ್ಮ ಪರಂಪರೆ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಬೇರುಗಳತ್ತ ನಾವು ಸಾಗಬೇಕು, ನಮ್ಮ ವಸಾಹತುಶಾಹಿ ಮನೋಸ್ಥಿತಿಯನ್ನು ಕೈಬಿಟ್ಟು ಭಾರತೀಯ ಅಸ್ಮಿತೆ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು ನಮ್ಮ ಮಕ್ಕಳಿಗೆ ಕಲಿಸಬೇಕು. ಆದಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು ನಮ್ಮ ಪ್ರಾಚೀನ ಗ್ರಂಥಗಳನ್ನು ತಿಳಿಯಲು ನಾವು ಸಂಸ್ಕೃತ ಕಲಿಯಬೇಕು,'' ಎಂದು ಅವರು ಹೇಳಿದರು.





