ಸರಕಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾದ ಮೇಲಿರುವ ಆಸಕ್ತಿ ರಾಜ್ಯದ ಜನತೆ ಮೇಲಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು, ಮಾ. 19: ‘ರಾಜ್ಯ ಸರಕಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿರುವ ಆಸಕ್ತಿ ರಾಜ್ಯದ ಜನತೆ ಮೇಲಿಲ್ಲ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಆರೋಪಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರಕಾರ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದೆ. ಸ್ಪೀಕರ್ ಕಾಗೇರಿ ಅವರು ಎಲ್ಲ ಸಚಿವರು ಶಾಸಕರಿಗೆ ಶಾಸಕರಿಗೆ ಸಿನಿಮಾ ವೀಕ್ಷಣೆ ಮಾಡಿ ಎಂದು ಆಹ್ವಾನ ನೀಡಿದರು. ಆದರೆ, ಇವರಿಗೆ ಸಿನಿಮಾ ಬಗ್ಗೆ ಇರುವ ಆಸಕ್ತಿ ಜನರ ಬಗ್ಗೆ ಏಕೆ ಇಲ್ಲ ಎಂಬುದು ನನ್ನ ಪ್ರಶ್ನೆ' ಎಂದು ಕೇಳಿದರು.
‘ಕಾಶ್ಮೀರಿ ಫೈಲ್ಸ್ ಚಿತ್ರದ ಕಥೆ ಬಗ್ಗೆ ನಿರ್ದೇಶಕರದ್ದು ಕಲ್ಪನೆ ಇರಬಹುದು. ಆದರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ನಾನು ರಾಜ್ಯದ ಸಮಸ್ಯೆ ವಿಚಾರವಾಗಿ ಮಾತನಾಡುತ್ತೇನೆ. ಇವರಿಗೆ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಇರುವ ಆಸಕ್ತಿಯನ್ನು ‘ಕರ್ನಾಟಕ ಫೈಲ್ಸ್' ಬಗ್ಗೆ ಕೊಡಬೇಕಾಗುತ್ತದೆ' ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಟೆಂಡರ್ ಗೋಲ್‍ಮಾಲ್: ‘ಸಮಾಜಕಲ್ಯಾಣ ಇಲಾಖೆ ಮಹತ್ವದ ಯೋಜನೆಗಳಲ್ಲಿ ‘ಗಂಗಾಕಲ್ಯಾಣ ಯೋಜನೆ'ಯೂ ಒಂದು. 2019-20-2021-22ರಲ್ಲಿ ಒಟ್ಟು 14,777 ಕೊಳವೆಬಾವಿ ಕೊರೆಸಿದ್ದು, 431 ಕೋಟಿ ರೂ. ಟೆಂಡರ್ ಬಗ್ಗೆ ಮಾಹಿತಿ ಕೇಳಿದ್ದೆ. ಸರಕಾರವೇ ಮಾಹಿತಿ ನೀಡಿದೆ. ಕೊಳವೆಬಾವಿ ಕೊರೆಸಲು ಡ್ರಿಲ್ಲಿಂಗ್, ಪಂಪ್ ಅಳವಡಿಕೆ, ವಿದ್ಯುತ್ ಸಂಪರ್ಕ ಸೇರಿ ಮೂರು ಹಂತದಲ್ಲಿ ಆಗಬೇಕು. ಮೊದಲು ಮೂರು ಟೆಂಡರ್ ಕರೆಯಲಾಗುತ್ತಿತ್ತು. ನಾನು ಸಚಿವನಾಗಿದ್ದಾಗ ಜಿಲ್ಲಾವಾರು ಪ್ಯಾಕೇಜ್ ನೀಡುತ್ತಿದ್ದೆವು. ಒಬ್ಬ ಗುತ್ತಿಗೆದಾರನಿಗೆ ಎರಡಕ್ಕಿಂತ ಹೆಚ್ಚು ಕೊಡುತ್ತಿರಲಿಲ್ಲ. ಆಗ ಜಿಲ್ಲಾಧಿಕಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಮೊದಲು ನಾವು ಪಂಪ್‍ಸೆಟ್ ಉತ್ಪಾದಕರಿಗೆ ಕೊಡುತ್ತಿದ್ದೆವು. ಗುಣಮಟ್ಟದ ಪಂಪ್‍ಸೆಟ್ ಸಿಗಲೆಂದು. ಆದರೆ ಈಗ ಡ್ರಿಲ್ಲಿಂಗ್, ಪಂಪ್‍ಸೆಟ್ ಎರಡೂ ಸೇರಿ ಟೆಂಡರ್ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ತರಾತುರಿಯಲ್ಲಿ ಗುತ್ತಿಗೆದಾರರನ್ನೇ ಬದಲು ಮಾಡಿದ್ದಾರೆ. ಕೆಬಿಜೆಎನ್‍ಎಲ್‍ನವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ' ಎಂದು ಪ್ರಿಯಾಂಕ್ ದೂರಿದರು.
‘ಸಮಾಜ ಕಲ್ಯಾಣ ಇಲಾಖೆ ಯೋಜನೆಗೆ ಕೇವಲ 10ರಿಂದ 15 ಜನರಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಸಂಪೂರ್ಣ ಅನುಭವವಿರಬೇಕು. ಕನಿಷ್ಠ 70 ಕೊಳವೆಬಾವಿ ಕೊರೆಯಿಸಿರಬೇಕು. ಆದರೆ, ಅಂತಹ ಅನುಭವವಿಲ್ಲದವರಿಗೆ ಟೆಂಡರ್ ನೀಡಿದ್ದು, ಇದು ಹೇಗೆ ಗುಣಮಟ್ಟದಿಂದ ಕೂಡಿಸಲು ಸಾಧ್ಯ' ಎಂದು ಪ್ರಿಯಾಂಕ್ ಖರ್ಗೆ ಎಂದು ಪ್ರಶ್ನಿಸಿದರು.
ಪ್ರಧಾನಿ ‘ಡಿಗ್ರಿ'ಯೇ ನಕಲಿ: ‘ಕೊಳವೆಬಾವಿ ಟೆಂಡರ್‍ನಲ್ಲಿ ಅಕ್ರಮದ ಬಗ್ಗೆ ನನಗಂತೂ ಅಚ್ಚರಿಯಿಲ್ಲ. ದೇಶದ ಪ್ರಧಾನಿಯ ‘ಡಿಗ್ರಿ'ಯೇ ನಕಲಿ. ಹೀಗಿರಬೇಕಾದರೆ ಟೆಂಡರ್ ನಕಲಿ ಮಾಡುವುದು ಕಷ್ಟವಲ್ಲ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಒಳ್ಳೆಯವರು. ಆದರೆ ಅಧಿಕಾರಿಗಳು ಅವರನ್ನ ದಾರಿತಪ್ಪಿಸುತ್ತಿದ್ದಾರೆ. ಲಕ್ಷ್ಮಿ ವೆಂಕಟೇಶ್ವರ ಅವರಿಗೆ ಟೆಂಡರ್ ನೀಡಿದ್ದು, ಮೊದಲು ಅವರಿಗೆ ಟೆಂಡರ್ ಕೊಟ್ಟಿಲ್ಲ. ಎರಡನೆ ತಿಂಗಳಿಗೆ ಎಲಿಜಬಲ್ ಸರ್ಟಿಫಿಕೇಟ್ ಕೊಡುತ್ತಾರೆ. ಇದು ಹೇಗೆ ಸಾಧ್ಯ ಅನ್ನುವುದು ನನ್ನ ಪ್ರಶ್ನೆ' ಎಂದು ಅವರು ಕೇಳಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಟೆಂಡರ್ ರದ್ದಾಗುತ್ತದೆ. ಆದಿ ಜಾಂಬವ ನಿಗಮದಲ್ಲಿ ಅರ್ಹರಾಗಿದ್ದಾರೆ. ಪಂಚಮುಖಿ ಬೋರ್‍ವೆಲ್‍ಗೆ ನೀಡಿದ್ದು, ಅವರ ಟರ್ನ್ ಓವರ್ ಮೀರಿ ಅಲಾಟ್ ಮಾಡಲಾಗಿದೆ. ಒಂದು ಕಡೆ ಇಲ್ಲದ್ದು ಇನ್ನೊಂದು ಕಡೆ ಹೇಗೆ ಅರ್ಹತೆ ಪಡೆಯಿತು ಎಂಬುದು ಯಕ್ಷಪ್ರಶ್ನೆಯಾಗಿದೆ. ಹೀಗಾಗಿ ಇದರಲ್ಲಿ ಮೇಲುನೋಟಕ್ಕೆ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.
‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್' ಎಂದರೆ ದಲಿತ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ಯೋಜನೆಯಲ್ಲಿ ಲೂಟಿ ಮಾಡುವುದು ‘ಸಬ್ ಕಾ ವಿಕಾಸ್' ಆಗುತ್ತದೆಯೇ? ಪ್ರಧಾನಿ ಮೋದಿ ‘ನಾ ಖವೂಗಾಂ ನಾ ಖಾನೆ ದೂಂಗ' ಎನ್ನುತ್ತಾರೆ. ಆದರೆ, ಶೇ.40ರಷ್ಟು ಕಮಿಷನ್ ಕುರಿತು ಮೋದಿಗೆ ದೂರು ನೀಡಿದ್ದು, ‘ಮೇ ಭಿ ಖವೂಗಾಂ ತುಂ ಕೋ ಭಿ ಖಿಲಾದೂಂಗ' ಎಂದು ತಮ್ಮ ಘೋಷಣೆ ಬದಲಾವಣೆ ಮಾಡಿದಂತಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಉತ್ತರ ಕೊಡಿ
‘ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಒಗ್ಗಟ್ಟಾಗಿ ಹೋಗುವ ನೀವು ಇದೇ ಒಗ್ಗಟ್ಟಿನಿಂದ ದಿಲ್ಲಿಗೆ ಹೋಗಿ ರಾಜ್ಯಕ್ಕೆ ಬರಬೇಕಿರುವ ಜಿಎಸ್ಪಿ ಪರಿಹಾರ ತರುವ ಯೋಗ್ಯತೆ ಇಲ್ಲ. ನಿಗಮದಲ್ಲಿನ ಭ್ರಷ್ಟಾಚಾರ ತಡೆಯಲು ಆಗುತ್ತಿಲ್ಲ. ಈ ದಾಖಲೆ ನನ್ನದಲ್ಲ ಸದನದಲ್ಲಿ ಸರಕಾರವೇ ಕೊಟ್ಟಿರುವ ದಾಖಲೆ. ಇವರಿಗೆ ದಲಿತರು, ಹಿಂದುಳಿದವರ ಬಗ್ಗೆ ಕಳಕಳಿ ಇದ್ದರೆ ಕೂಡಲೆ ಈ ಟೆಂಡರ್ ರದ್ದಾಗಬೇಕು. ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಇದಕ್ಕೆ ಅನುಮೋದನೆ ನೀಡಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು'
-ಪ್ರಿಯಾಂಕ್ ಖರ್ಗೆ ಮಾಜಿ ಸಚಿವ







