ಬೆಂಗಳೂರು: ಪೊಲೀಸರಿಂದ 80 ಲಕ್ಷ ರೂ. ಮೌಲ್ಯದ ರಕ್ತಚಂದನ ದುರ್ಬಳಕೆ ಆರೋಪ; ತನಿಖೆಗೆ ಆದೇಶ

ಫೈಲ್ ಚತ್ರ
ಬೆಂಗಳೂರು, ಮಾ.19: ಇಲ್ಲಿನ ರಾಮಮೂರ್ತಿ ನಗರ ಪೊಲೀಸರು ಬರೋಬ್ಬರಿ 80 ಲಕ್ಷ ರೂ. ಮೌಲ್ಯದ ರಕ್ತ ಚಂದನ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಅಪರಾಧ ಪ್ರಕರಣವೊಂದರ ಸಂಬಂಧ ಪೊಲೀಸರ ತಂಡ ಮಂಗಳೂರಿಗೆ ತೆರಳಿದ್ದ ವೇಳೆ ಬೆಳ್ತಂಗಡಿ ಸಮೀಪದ ವೇಣೂರು ಅರಣ್ಯದ ಬಳಿ ದುಷ್ಕರ್ಮಿಗಳು ರಕ್ತಚಂದನ ಸಾಗಿಸುತ್ತಿದ್ದರು. ಈ ವೇಳೆ ಮಫ್ತಿಯಲ್ಲಿದ್ದ ಪೊಲೀಸರು ಮತ್ತು ದುಷ್ಕರ್ಮಿಗಳ ಮಧ್ಯ ಗಲಾಟೆ ನಡೆದಿತ್ತು ಎನ್ನಲಾಗಿದೆ.
ತದನಂತರ, ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆದರೆ, ಇನ್ನೋರ್ವ ದುಷ್ಕರ್ಮಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದ. ಇದರಿಂದ ಗಾಬರಿಗೊಂಡ ಪೊಲೀಸರು, ಕಾರಿನ ಹಿಂಭಾಗದಲ್ಲಿ ಅವಿತುಕೊಂಡಿದ್ದರು. ಈ ವೇಳೆ ರಕ್ತ ಚಂದನವನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ಬಳಿಕ 750 ಕೆಜಿ ತೂಕದ ರಕ್ತಚಂದನವನ್ನು ವಶಕ್ಕೆ ಪಡೆದ ರಾಮಮೂರ್ತಿ ನಗರ ಪೊಲೀಸರು, ಅದನ್ನು ಠಾಣೆಗೆ ತೆಗೆದುಕೊಂಡು ಬಂದಿದ್ದರು. ಬಳಿಕ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ನ್ಯಾಯಾಲಯದ ಮುಂದೆ ವಶಪಡಿಸಿಕೊಂಡ ರಕ್ತಚಂದನವನ್ನು ಹಾಜರುಪಡಿಸಬೇಕಿತ್ತು.
ಆದರೆ, ರಾಮಮೂರ್ತಿ ನಗರ ಪೊಲೀಸರು ಈ ಸಂಬಂಧ ಕೋರ್ಟ್ ಗಮನಕ್ಕೂ ತಂದಿಲ್ಲ, ಪ್ರಕರಣ ಕೂಡ ದಾಖಲು ಮಾಡಿಲ್ಲ. ರಕ್ತಚಂದನ ವಶಕ್ಕೆ ಪಡೆದು ಆರು ತಿಂಗಳು ಕಳೆದರೂ ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಿರಲಿಲ್ಲ. ರಕ್ತಚಂದನವನ್ನು ಅಕ್ರಮವಾಗಿ ಪೊಲೀಸರೇ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಜಗನ್ ಕುಮಾರ್ ಎಂಬುವವರು ಕಮಲ್ ಪಂತ್ಗೆ ದೂರು ನೀಡಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಇಲಾಖಾ ತನಿಖೆಗೆ ಆದೇಶ ಹೊರಡಿಸಿದ್ದಾರೆ.







