ಇನ್ನು ಕೆಲ ವರ್ಷಗಳಲ್ಲಿ ಜಮ್ಮು ಕಾಶ್ಮೀರ, ಈಶಾನ್ಯ ಭಾರತದಲ್ಲಿ ಸಿಆರ್ಪಿಎಫ್ ಸೇವೆ ಅಗತ್ಯವಾಗದು: ಅಮಿತ್ ಶಾ

ಅಮಿತ್ ಶಾ (File Photo: PTI)
ಹೊಸದಿಲ್ಲಿ: ದೇಶದ ಅತಿ ದೊಡ್ಡ ಅರೆಸೇನಾಪಡೆಯಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಸೇವೆಯನ್ನು ಶ್ಲಾಘಿಸಿದ ಗೃಹ ಸಚಿವ ಅಮಿತ್ ಶಾ, ಇನ್ನು ಕೆಲ ವರ್ಷಗಳಲ್ಲಿ ಸಿಆರ್ಪಿಎಫ್ ಸೇವೆಗಳು ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಅಗತ್ಯವಾಗದು ಎಂದಿದ್ದಾರೆ.
ಶ್ರೀನಗರದ ಮೌಲಾನ ಆಝಾದ್ ಕ್ರೀಡಾಂಗಣದಲ್ಲಿ ಇಂದು ಸಿಆರ್ಪಿಎಫ್ ನನ 83ನೇ ರೈಸಿಂಗ್ ಡೇ ಪೆರೇಡ್ ಸಂದರ್ಭ ಅವರು ಮಾತನಾಡುತ್ತಿದ್ದರು.
"ಕಾಶ್ಮೀರ, ನಕ್ಸಲ್ ಪೀಡಿತ ಪ್ರದೇಶಗಳು ಮತ್ತು ಈಶಾನ್ಯ ಭಾರತದಲ್ಲಿ ಸಿಆರ್ಪಿಎಫ್ ಬದ್ಧತೆಯಿಂದ ಕಾರ್ಯಾಚರಿಸುತ್ತಿರುವುದನ್ನು ನೋಡಿದರೆ, ಮುಂದಿನ ಕೆಲ ವರ್ಷಗಳಲ್ಲಿ ಈ ಮೂರೂ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಸಿಆರ್ಪಿಎಫ್ ಸೇವೆಗಳು ನಮಗೆ ಬೇಕಾಗದು ಎಂಬ ವಿಶ್ವಾಸ ನನಗಿದೆ. ಇದು ಸಾಧ್ಯವಾದರೆ ಇದರ ಪೂರ್ಣ ಶ್ರೇಯ ಸಿಆರ್ಪಿಎಫ್ಗೆ ಸಲ್ಲುತ್ತದೆ,'' ಎಂದು ಶಾ ಹೇಳಿದರು.
ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರೇಷಿತ ಉಗ್ರವಾದದ ವಿರುದ್ಧದ ಹೋರಾಡುವಲ್ಲಿ ಕೇಂದ್ರೀಯ ಪಡೆಗಳು ಮಹತ್ವದ ಪಾತ್ರ ವಹಿಸಿವೆ, ಎಂದು ಹೇಳಿದ ಅವರು ಜಮ್ಮು ಕಾಶ್ಮೀರದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಾಧಿಸುತ್ತಿರುವ ಸ್ಥಳೀಯಾಡಳಿತದ ಶ್ರಮವನ್ನೂ ಶ್ಲಾಘಿಸಿದರು.
ಸಿಆರ್ಪಿಎಫ್ನ ರೈಸಿಂಗ್ ಡೇ ಪೆರೇಡ್ ಇದೇ ಮೊದಲ ಬಾರಿ ದೆಹಲಿಯ ಹೊರಗಿನ ಒಂದು ನಗರದಲ್ಲಿ ನಡೆದಿದೆ.





