ನ್ಯಾ. ಮಲ್ಲಿಕಾರ್ಜುನ ಗೌಡರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಮಾ21ಕ್ಕೆ ಧರಣಿ ಸತ್ಯಾಗ್ರಹ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.19: ಗಣರಾಜ್ಯೋತ್ಸವದಂದೇ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರನ್ನು ವೃತ್ತಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ, ಇದೇ ಮಾ.21ರಂದು ಧರಣಿ ಸತ್ಯಾಗ್ರಹಕ್ಕೆ ಭಾರತೀಯ ದಲಿತ ಸಂಘರ್ಷ ಸಮಿತಿಯು ಕರೆ ನೀಡಿದೆ.
ಶನಿವಾರ ಪ್ರೆಸ್ಕ್ಲಬ್ನಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ. ಹೆಚ್. ಪ್ರಕಾಶ್ ಬೀರಾವರ ಮಾತನಾಡಿ, ರಾಯಚೂರು ಜಿಲ್ಲಾ ನ್ಯಾಯಾಲಯ ಅವರಣದಲ್ಲಿ ಗಣರಾಜೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ತೆಗೆದು ಅವಮಾನ ಮಾಡಿದ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಇದುವರೆಗೂ ರಾಜ್ಯ ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಸಂವಿಧಾನದ ಅಡಿಯಲ್ಲಿ ಮೀಸಲಾತಿಯನ್ನು ಪಡೆದ ಯಾವೊಬ್ಬ ದಲಿತ ಚುನಾಯಿತ ಪ್ರತಿನಿಧಿ ಇದರ ವಿರುದ್ಧ ಧ್ವನಿ ಎತ್ತದೆ ಇರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಕಿಡಿ ಕಾರಿದರು.
ಸಂವಿಧಾನ ಮತ್ತು ಕಾನೂನನ್ನು ತಿಳಿದಿರುವ ನ್ಯಾಯಾಧೀಶ ಇಂತಹ ದುಷ್ಕೃತ್ಯ ಎಸಗಿರುವುದು ಸರಿಯಲ್ಲ. ಈ ಕೂಡಲೇ ಉಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ, ಘಟನೆಯನ್ನು ಪರಿಶೀಲಿಸಿ, ತಪ್ಪಿತಸ್ಥ ನ್ಯಾಯಾಧೀಶರನ್ನು ವಜಾಗೊಳಿಸುವಂತೆ ಅವರು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಮಂಜುನಾಥ ಸ್ವಾಮಿ, ಕೆ. ತಿಮ್ಮಾರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
50 ಲಕ್ಷ ಪರಿಹಾರ ನೀಡಬೇಕು
ಧರ್ಮಸ್ಥಳದ ಕಲ್ಯಾಡಿ ಗ್ರಾಮದ ನಿವಾಸಿಯಾದ ದಿನೇಶ್ ಎಂಬ ದಲಿತ ವ್ಯಕ್ತಿಯನ್ನು ಮನುವಾದಿ ಗುಂಪಿನ ಕೃಷ್ಣ ಎಂಬ ವ್ಯಕ್ತಿ ಕೊಲೆ ಮಾಡಿರುವ ಘಟನೆ ನಡೆದಿದೆ. ಇದನ್ನು ಸರಕಾರವು ಗಂಬೀರವಾಗಿ ಪರಿಗಣಿಸದ ಕಾರಣ ಕೊಲೆಗಾರರಿಗೆ ಶಿಕ್ಷೆಯಾಗಿಲ್ಲ. ಕೊಲೆಯಾದ ದಲಿತ ಯುವಕನ ಕುಟುಂಬವು ಬೀದಿಪಾಲಾಗಿದ್ದು, ಸರಕಾರವು ಕೂಡಲೇ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು. ಜತೆಗೆ ಕುಟುಂಬ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು.
-ಡಾ. ಹೆಚ್. ಪ್ರಕಾಶ್ ಬೀರಾವರ, ರಾಜ್ಯಾಧ್ಯಕ್ಷ, ಭಾರತೀಯ ದಲಿತ ಸಂಘರ್ಷ ಸಮಿತಿ







