ಶಾಲೆಗಳಲ್ಲಿ ಭಗವದ್ಗೀತೆ, ಬೈಬಲ್, ಕುರ್ ಆನ್ ಕಲಿಕೆಗೆ ವಿರೋಧವಿಲ್ಲ: ಸಿದ್ದರಾಮಯ್ಯ

ಮಂಗಳೂರು : ಶಾಲೆಗಳಲ್ಲಿ ಭಗವದ್ಗೀತೆ, ಬೈಬಲ್, ಕುರ್ ಆನ್ ಕಲಿಸುವ ವಿಚಾರದಲ್ಲಿ ನಮ್ಮದೇನೂ ವಿರೋಧವಿಲ್ಲ. ಆದರೆ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿರುವ ಗುಣಮಟ್ಟದ ನೈತಿಕ ಶಿಕ್ಷಣ ಕಲಿಸುವುದು ಮುಖ್ಯ ಎಂದು ಮಾಜಿ ಸಿಎಂ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ದ.ಕ.ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಗವದ್ಗೀತೆಯ ಬಗ್ಗೆ ರಾಜ್ಯ ಸರಕಾರ ಇನ್ನೂ ತೀರ್ಮಾನ ಮಾಡಿಲ್ಲ. ಭಗವದ್ಗೀತೆ, ರಾಮಾಯಣ, ಮಹಾಭಾರತ ಸಹಿತ ದೇವರ ಬಗ್ಗೆಯೂ ಮನೆಯಲ್ಲಿ ಹೇಳಿ ಕೊಡ್ತಾರೆ. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೂ ಮಾಡಬಾರದು ಎಂದ ಸಿದ್ದರಾಮಯ್ಯ, ನಮ್ಮದು ಬಹುಸಂಸ್ಕೃತಿಯ ರಾಷ್ಟ್ರ, ನಮ್ಮಲ್ಲಿ ಸಹಬಾಳ್ವೆ ಮುಖ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರುವ ನಾನು ಎಂದು ಹೇಳಿದರು.
ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್‌ನ ಮೃದು ಹಿಂದುತ್ವದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕಾಂಗ್ರೆಸ್‌ನದ್ದು ಸಾಫ್ಟ್ ಅಥವಾ ಹಾರ್ಡ್ ಹಿಂದುತ್ವ ಅಂತ ಇಲ್ಲ. ನಾವು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟವರು. ಎಲ್ಲ ಧರ್ಮಗಳಿಗೂ ಸಮಾನ ಗೌರವ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕೋರ್ಟ್ ನಿರ್ಧಾರ ವಿರೋಧ ಸರಿಯಲ್ಲು: ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಇರುವವರು ಬಂದ್ ಮಾಡಿದ್ದಾರೆ. ಆದರೆ ಕೋರ್ಟ್ ನಿರ್ಧಾರವನ್ನು ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧ ಮಾಡಬಾರದು. ಅದೇ ರೀತಿ ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದು ಹೇಳಿದರು.
ಕಾಶ್ಮೀರ್ ಫೈಲ್ಸ್ ನೋಡಲ್ಲ: ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿನಿಮಾ ಮಾಡಿ ತೋರಿಸೋದನ್ನು ಬೇಡ ಅನ್ನಲ್ಲ, ಆದರೆ ಸತ್ಯ ತೋರಿಸಲಿ. ಕಾಶ್ಮೀರದ ಉಗ್ರರ ಕೃತ್ಯದಿಂದ ಪಂಡಿತರ ಜತೆಗೆ ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಎಂಬುದನ್ನೂ ಹೇಳಬೇಕು. ಆಗ ಯಾರ ಸರಕಾರ ಇತ್ತು? ಅವರೇನು ಮಾಡಿದ್ದರು ಎನ್ನುವುದನ್ನೂ ತೋರಿಸಬೇಕು. ಸಾಮಾನ್ಯವಾಗಿ ನಾನು ಥಿಯೇಟರ್‌ಗೆ ಹೋಗಿ ಸಿನೆಮಾ ನೋಡಲ್ಲ. ಹಾಗೇನೇ ಕಾಶ್ಮೀರ್ ಫೈಲ್ ಕೂಡ ನೋಡಲ್ಲ. ಕಾಶ್ಮೀರ್ ಫೈಲ್ ಚಿತ್ರ ತೋರಿಸಿದಂತೆ ಗುಜರಾತ್ ಘಟನೆಯನ್ನೂ ಆಧರಿಸಿದ ಚಿತ್ರವನ್ನೂ ತೋರಿಸಲಿ ಎಂದರು.
ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಐವನ್ ಡಿಸೋಜ ಮತ್ತಿತರರು ಹಾಜರಿದ್ದರು.