ಉಕ್ರೇನ್ ವಿರುದ್ಧ ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗಿಸಿದ ರಶ್ಯ

photo courtesy:twitter/@angelf94
ಮಾಸ್ಕೊ, ಮಾ.19: ಉಕ್ರೇನ್ ವಿರುದ್ಧದ ಕದನದಲ್ಲಿ ಇದೇ ಪ್ರಥಮ ಬಾರಿಗೆ ರಶ್ಯವು ತನ್ನ ಅತ್ಯಾಧುನಿಕ ಕಿಂಝಾಲ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿ ಉಕ್ರೇನ್ನ ಪಶ್ಚಿಮ ಪ್ರಾಂತದಲ್ಲಿನ ಶಸ್ತ್ರಾಸ್ತ್ರ ಸಂಗ್ರಹಾಗಾರವನ್ನು ಧ್ವಂಸಗೊಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ನ ಪಶ್ಚಿಮದ ಇವಾನೊ-ಫ್ರಾಂಕಿವ್ಸ್ಕ್ ಪ್ರಾಂತದ ಡೆಲಿಯಟಿನ್ ಗ್ರಾಮದಲ್ಲಿ ಕ್ಷಿಪಣಿ ಹಾಗೂ ವಾಯುದಾಳಿಯಲ್ಲಿ ಬಳಸುವ ಮದ್ದುಗುಂಡುಗಳನ್ನು ಶೇಖರಿಸಿಟ್ಟಿದ್ದ ಭೂಗತ ಗೋದಾಮಿನ ಮೇಲೆ ಕಿಂಝಾಲ್ ಹೈಪರ್ಸಾನಿಕ್ ಏರೊಬಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿ ಅದನ್ನು ಧ್ವಂಸಗೊಳಿಸಲಾಗಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಕದನದಲ್ಲಿ ಹೈಪರ್ಸಾನಿಕ್ ಕ್ಷಿಪಣಿಯನ್ನು ಇದೇ ಪ್ರಥಮ ಬಾರಿಗೆ ಬಳಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ. ಇವಾನೊ ಫ್ರಾಂಕಿವ್ಸ್ಕ್ ಪ್ರಾಂತವು ನೇಟೊ ಸದಸ್ಯ ದೇಶ ರೊಮೇನಿಯಾದೊಂದಿಗೆ 50 ಕಿ.ಮೀ ಉದ್ದದ ಗಡಿಯನ್ನು ಹೊಂದಿದ್ದು ಇಲ್ಲಿನ ಕರ್ಪಾಥಿಯನ್ ಬೆಟ್ಟದ ತಪ್ಪಲ್ಲಿನಲ್ಲಿ ಡೆಲಿಯಟಿನ್ ಗ್ರಾಮವಿದೆ. ಶಬ್ದದ ವೇಗಕ್ಕಿಂತ 10 ಪಟ್ಟು ಕ್ಷಿಪ್ರ ವೇಗ ಹೊಂದಿರುವ ಕಿಂಝಾಲ್ ಹೈಪರ್ಸಾನಿಕ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯ ಕಣ್ತಪ್ಪಿಸಿ ಗುರಿಯೆಡೆಗೆ ಧಾವಿಸುವ ಕ್ಷಮತೆ ಹೊಂದಿದ್ದು ಇದೊಂದು ಆದರ್ಶ ಅಸ್ತ್ರ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಣ್ಣಿಸಿದ್ದಾರೆ.





