ಗುರುಪುರ; ಜೋಡಿಯ ಪ್ರಯಾಣಕ್ಕೆ ಅಡ್ಡಿಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು

ಮಂಗಳೂರು : ಹಿಂದೂ ಮಹಿಳೆ ಜೊತೆ ಮುಸ್ಲಿಂ ಯುವಕನೊಬ್ಬ ಪ್ರಯಾಣಿಸುತ್ತಿದ್ದಾನೆ ಎಂದು ಶಂಕಿಸಿದ ಸಂಘ ಪರಿವಾರದ ಕಾರ್ಯಕರ್ತರು ಆ ಜೋಡಿಯ ಪ್ರಯಾಣಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಶುಕ್ರವಾರ ಬಸ್ಸಿನಲ್ಲಿ ಎರಡು ಧರ್ಮದ ಜೋಡಿ ಪ್ರಯಾಣಿಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಸಂಘಪರಿವಾರದ ಕಾರ್ಯಕರ್ತರು ಬಸ್ಸನ್ನು ತಡೆದು ನಿಲ್ಲಿಸಿ ಪ್ರಯಾಣಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ.
ಖಾಸಗಿ ಬಸ್ಸಿನಲ್ಲಿ ಮೂಡುಬಿದಿರೆಯಿಂದ ಮಂಗಳೂರಿನತ್ತ ಯುವಕ ಮತ್ತು ವಿವಾಹಿತೆ ಜತೆಯಾಗಿ ಪ್ರಯಾಣ ಮಾಡುತ್ತಿದ್ದರು. ಬಸ್‌ನಲ್ಲಿ ಇವರ ಅನುಮಾನಾಸ್ಪದ ನಡವಳಿಕೆ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಬಸ್ಸನ್ನು ತಡೆದು ಜೋಡಿಯನ್ನು ಕೆಳಗೆ ಇಳಿಸಿದ್ದಾರೆ. ಬಳಿಕ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಇಬ್ಬರೂ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟವಾಗಿದೆ.
ವಿವಾಹಿತೆಯು ಮಿಜಾರು ಗ್ರಾಮದ ನಿವಾಸಿಯಾಗಿದ್ದು, ಮುಂಬೈನಲ್ಲಿದ್ದಾಗ ಬಿಹಾರದ ಯುವಕನೊಂದಿಗೆ ಪ್ರೇಮ ಉಂಟಾಗಿತ್ತು ಎಂದು ಹೇಳಲಾಗಿದೆ. ಈಕೆಗೆ ಬೆಂಗಳೂರು ಮೂಲದ ಯುವಕನ ಜತೆ ವಿವಾಹ ಆಗಿತ್ತು. ಆದರೂ ಬಿಹಾರ ಮೂಲದ ಯುವಕನ ಜತೆ ಪ್ರೇಮ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.
ಹೀಗಾಗಿ ಬಿಹಾರದಿಂದ ಆಗಮಿಸಿದ ಯುವಕನು ವಿವಾಹಿತೆಯ ಜೊತೆ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ. ಮೂಡುಬಿದಿರೆಯಿಂದ ಮಂಗಳೂರಿಗೆ ಸುತ್ತಾಡಲು ಈ ಜೋಡಿ ಬಸ್ಸಿನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಬಜ್ಪೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದಾರೆ.







