ಮಾರಿಪೂಜೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ಇಲ್ಲ; ದೇಶದ ಮೂಲ ಆಶಯಕ್ಕೆ ಧಕ್ಕೆ: ದಸಂಸ ಖಂಡನೆ
ಉಡುಪಿ : ಕಾಪು ಮಾರಿಪೂಜೆ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡದ ಬಗ್ಗೆ ತೆಗೆದುಕೊಂಡ ತೀರ್ಮಾನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲವೂ ಸಂವಿಧಾನದ ಆಧಾರ ದಲ್ಲಿಯೇ ನಡೆಯಬೇಕು. ಈ ದೇಶದಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಇಲ್ಲ. ಇಲ್ಲಿ ಎಲ್ಲರಿಗೂ ಎಲ್ಲದಕ್ಕೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಹಿಂದೂ ಧರ್ಮ ವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ತಿಳಿಸಿದ್ದಾರೆ.
ಸಹಬಾಳ್ವೆ, ಸಹೋದರತೆ ನಮ್ಮ ಸಂಸ್ಕೃತಿ. ಸಾವಿರಾರು ವರ್ಷಗಳ ವಿವಿಧತೆ ಯಲ್ಲಿ ಏಕತೆಯನ್ನು ಎತ್ತಿ ಹಿಡಿದು ಪ್ರಪಂಚಕ್ಕೇ ಮಾದರಿಯಾದ ಈ ದೇಶದ ಮೂಲ ಆಶಯಕ್ಕೆ ದಕ್ಕೆ ತರುವ ಯಾವುದೇ ಘಟನೆಯನ್ನು ನಾವು ಸಹಿಸುವುದಿಲ್ಲ. ನಾವು ಈ ದೇಶದ ಮೂಲ ನಿವಾಸಿಗಳು. ಎಲ್ಲಾ ಜಾತಿ, ಧರ್ಮದವರು ಒಟ್ಟಾಗಿ ಬದುಕುವ ಈ ದೇಶದ ಅಖಂಡತೆಯನ್ನು ಸಹಿಸದ ಸಮಾಜ ಘಾತುಕ ಶಕ್ತಿಗಳು ಇಲ್ಲಿ ಅರಾಜಕತೆ ಉಂಟು ಮಾಡಿ ಅಶಾಂತಿ ಸೃಷ್ಟಿಸಿ ತಮ್ಮ ಹಿಡನ್ ಅಜಂಡಾ ಜಾರಿಗೆ ತರಲು ಹೊರಟಿವೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







