ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಬಗ್ಗೆಯೂ ಸಿನಿಮಾ ಮಾಡಿ: ವಾಟಾಳ್ ನಾಗರಾಜ್

ಮೈಸೂರು,ಮಾ.19: ಸಿನೆಮಾವೊಂದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ನಾಯಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್, ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಬಗ್ಗೆ ಸಿನಿಮಾ ಮಾಡಿ ನಿಮ್ಮ ಬಂಡವಾಳ ಜನತೆಗೆ ತಿಳಿಸಿ ಎಂದು ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾಗನಾಡಿದ ಅವರು, ದಿ ಕಾಶ್ಮೀರಿ ಫೈಲ್ ಚಿತ್ರದ ಪರ-ವಿರೋಧ ವಿಚಾರ. ನಾನು ಕಾಶ್ಮೀರಿ ಫೈಲ್ ಚಿತ್ರ ನೋಡಿಲ್ಲ, ನೋಡಬೇಕಾಗೂ ಇಲ್ಲ. ಮುಂದೆ ಎಲ್ಲಾ ಪಾರ್ಟಿ ಯವರೂ ಒಂದೊಂದು ಸ್ಟುಡಿಯೊ ಇಟ್ಟುಕೊಳ್ಳಿ. ನಿಮ್ಮ ಪಕ್ಷದ ಪರವಾಗಿ ನೀವು ಮಾಡಿರುವ ಕೆಲಸಗಳ ಬಗ್ಗೆ ಸಿನಿಮಾ ಮಾಡಿ. ಕಾಶ್ಮೀರ ಫೈಲ್ ಫಿಲ್ಮ್ ನಿಂದ ನಿರ್ಮಾಪಕನಿಗೆ ಲಾಭ ಅಷ್ಟೇ. ಇದರಿಂದ ಯಾರಿಗೂ ಲಾಭವಿಲ್ಲ, ಅನಗತ್ಯ ಚರ್ಚೆಯೂ ಬೇಕಿಲ್ಲ.
ಕೊರೋನ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಆಮ್ಲಜನಕ ಕೊರತೆಯಿಂದ ಅನೇಕರು ಸತ್ತರು ಈಬಗ್ಗೆ ಸಿನಿಮಾ ಮಾಡಿ. ಗಂಗಾ ನದಿಯಲ್ಲಿ 2ಸಾವಿರ ಹೆಣಗಳು ತೇಲಿ ಬಂದ ಬಗ್ಗೆ ಸಿನಿಮಾ ಮಾಡಿ. ಕರೋನದಿಂದ ಅನೇಕರಿಗೆ ಬೆಡ್ ಸಿಗದೆ ಸತ್ತ ಬಗ್ಗೆ ಯಾಕೆ ಸಿನಿಮಾ ಮಾಡಿಲ್ಲ. ಚಿತ್ರೋದ್ಯಮದ ಸಾಂಸ್ಕೃತಿಕ ಪ್ರತೀಕವಾದದ್ದು ಇದನ್ನು ರಾಜಕೀಯಕ್ಕೆ ಬಳಸಬಾರದು. ಈ ಚಿತ್ರಕ್ಕೆ ರಿಯಾಯಿತಿ ಘೋಷಣೆ ಮಾಡಿರೋದು ಕೂಡಾ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇಂತಹ ವಿಚಾರ ವೈಭವೀಕರಿಸುವುದು ಸರಿಯಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ. ಇಂತಹ ಸಂದರ್ಭದಲ್ಲಿ ಭಗವದ್ಗೀತೆ ಅಳವಡಿಕೆ ಅವಶ್ಯಕತೆ ಏನಿದೆ.? ವಿದ್ಯಾರ್ಥಿಗಳು ವಿಚಾರವಂತರಾಗಬೇಕು. ವಿದ್ಯಾರ್ಥಿಗಳ ಬಲ ಪಡಿಸುವ ಪಠ್ಯ ಕ್ರಮ ಅಳವಡಿಸಬೇಕು. ಸರ್ಕಾರದ ತನ್ನ ವಿಫಲತೆ ಮುಚ್ಚಲು ಈ ರೀತಿ ಚರ್ಚೆ ಹುಟ್ಟುಹಾಕಿದೆ. ಈ ವಿಚಾರಕ್ಕೆ ಮಂತ್ರಿ ಮಂಡಲದಲ್ಲಿ ಸಮನ್ವಯತೆ ಇಲ್ಲ. ಚರ್ಚೆ ನಡೆಸದೇ ಯಾವುದೇ ನಿರ್ಧಾರ ಮಾಡಬಾರದು ಎಂದು ಹೇಳಿದರು.
ಶಿಕ್ಷಣ ತಜ್ಞರು, ಹಿರಿಯ ಮಂತ್ರಿಗಳು ಹಾಗೂ ಪೋಷಕರ ಜೊತೆ ಚರ್ಚೆ ನಡೆಸಬೇಕು. ಏಕಾಏಕಿ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಹೇಳಿದರು.







