ಬಂದ್ ಕರೆ ನೀಡಿದ್ದಕ್ಕೆ ಮುಸ್ಲಿಮರ ಬಗ್ಗೆ ಭೈರಪ್ಪ ಹರೀಶ್ ಕುಮಾರ್ ಅವಹೇಳನಕಾರಿ ವಿಡಿಯೋ
"ನಿಮ್ಮ ಬಣ್ಣ ಬಯಲಾಯಿತು" ಎಂದು ನೆಟ್ಟಿಗರ ತರಾಟೆ

ಬೆಂಗಳೂರು: ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ರವರು ಪೋಸ್ಟ್ ಮಾಡಿದ್ದರೆನ್ನಲಾದ ಫೇಸ್ ಬುಕ್ ಪೋಸ್ಟ್ ನ ಚಿತ್ರವೊಂದು ಸಾಮಾಜಿಕ ತಾಣದಾದ್ಯಂತ ವಿವಾದ ಸೃಷ್ಟಿಸಿದೆ. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ಧರ್ಮೀಯರು ನೀಡಿದ್ದ ಬಂದ್ ಕರೆಯನ್ನು ವಿರೋಧಿಸಿ ಹರೀಶ್ ಕುಮಾರ್ ಲೈವ್ ವೀಡಿಯೋ ಮಾಡಿದ್ದ ಬೆನ್ನಿಗೇ ಈ ಸ್ಕ್ರೀನ್ ಶಾಟ್ ವೈರಲ್ ಆಗಿದೆ. "ಮೊದಲು ಈ ಪೋಸ್ಟರ್ ನೋಡಿ ತಾಲಿಬಾನ್ ದೇಶ ಬಂದ್ ಗೆ ಏನಾದರೂ ಕರೆ ಕೊಟ್ಟಿದ್ದೀಯಾ ಅನ್ನಿಸ್ತು" ಎಂಬ ತಲೆಬರಹದ ಅವರದ್ದೆನ್ನಲಾದ ಪೋಸ್ಟ್ ವೈರಲ್ ಆಗಿದೆ.
ಕರ್ನಾಟಕ ಬಂದ್ ಮುನ್ನಾದಿನ ಬಂದ್‌ಗೆ ಕರೆಕೊಟ್ಟವರನ್ನು ತರಾಟೆಗೆ ತೆಗೆದಿದ್ದ ಭೈರಪ್ಪ ಹರೀಶ್ ಕುಮಾರ್, 'ಫೇಸ್‌ಬುಕ್ ಲೈವ್' ನಲ್ಲಿ "ಕರ್ನಾಟಕ ಏನು ನಿಮ್ಮಪ್ಪಂದಾ? ಕರ್ನಾಟಕ ಬಂದ್ ಕರೆ ನೀಡಲು ನಿಮಗೇನು ಅಧಿಕಾರ" ಎಂದು ಪ್ರಶ್ನಿಸಿದ್ದರು.
"ಕರ್ನಾಟಕ ಬಂದ್ ಕರೆ ನೀಡಲು ನೀವ್ಯಾರು? ಕರ್ನಾಟಕ ವಾರಸುದಾರರು ಇದ್ದೀವಿ, ಕನ್ನಡಪರ ಸಂಘಟನೆಗಳು ಇವೆ, ರೈತಪರ ಸಂಘಟನೆಗಳು ಇವೆ. ನಮ್ಮನ್ನು ಸಂಪರ್ಕಿಸದೆ ಬಂದ್ ಮಾಡಲು ನೀವೇ ಹೇಗೆ ತೀರ್ಮಾನ ಮಾಡುತ್ತೀರಿ" ಎಂದು ಕೇಳಿದ್ದಾರೆ.
ಮುಂದುವರಿದು, "ಕನಿಷ್ಟ ಸ್ಪಷ್ಟ ಕನ್ನಡ ಮಾತನಾಡುವ ಯೋಗ್ಯತೆ ಇಲ್ಲ ನಿಮಗೆ, ತಮಿಳುನಾಡಿನ ಮುಸ್ಲಿಮರನ್ನು ನೋಡಿ ಕಲಿತುಕೊಳ್ಳಿ, ಅವರು ತಮಿಳಿಗರ ಜೊತೆ ಬೆರೆತು ತಮಿಳರಾಗಿ ಬದುಕುತ್ತಿದ್ದಾರೆ. ಅವರನ್ನು ನೋಡಿ ಕಲೀರಿ. ಆಂಧ್ರದಲ್ಲಿ ಮುಸ್ಲಿಮರು ಸ್ಪಷ್ಟವಾಗಿ ತೆಲುಗು ಮಾತಾಡುತ್ತಾರೆ. ಕೇರಳದಲ್ಲಿ ಸ್ಪಷ್ಟವಾಗಿ ಮಳೆಯಾಲಂ ಮಾತನಾಡುತ್ತಾರೆ. ಇಲ್ಲಿರುವ ಮುಸಲ್ಮಾನರು ಕನ್ನಡಕ್ಕೆ ಎಷ್ಟು ಕೊಟ್ಟಿದ್ದೀರಿ? ಕನ್ನಡ ಬರಲ್ಲ ಅಂದ್ರೆ ಕನ್ನಡ ಬಿಟ್ಟು ತೊಲಗಿ ಅನ್ಬೇಕಾಗುತ್ತೆ. ಕನ್ನಡ ಕಲಿಯೋ ಯೋಗ್ಯತೆ ಇಲ್ಲದ ಮೇಲೆ ಕರ್ನಾಟಕದಲ್ಲಿ ಏನಕ್ಕೆ ಬದುಕಬೇಕು ನೀವು" ಎಂದು ಭೈರಪ್ಪ ಹರೀಶ್ ಕುಮಾರ್ ತೀರಾ ಕೀಳು ಅಭಿರುಚಿಯಲ್ಲಿ ಪ್ರಶ್ನಿಸಿದ್ದರು.
ಮಾತ್ರವಲ್ಲದೆ, ಬಂದ್ ವೇಳೆ ಕರ್ನಾಟಕದ ಶಾಂತಿ ಕದಡುವ ಯೋಜನೆ ಹಾಕಿಕೊಂಡಿದ್ದಾರೆ, ನಾಳೆ (ಬಂದ್ ದಿನ) ಯಾರಾದರೂ ರಸ್ತೆಗೆ ಇಳಿದರೆ ಅವರ ಕೊರಳು ಪಟ್ಟಿ ಹಿಡಿಯಿರಿ ಎಂದು ಭೈರಪ್ಪ ಹರೀಶ್ ಕುಮಾರ್ ಕರೆ ನೀಡಿದ್ದರು.
ಹೈಕೋರ್ಟ್ ತೀರ್ಪು ಒಪ್ಪದಿದ್ದರೆ ಸುಪ್ರೀಂ ಕೋರ್ಟ್ ಹೋಗಿ, ಸುಪ್ರೀಂ ಕೋರ್ಟಲ್ಲೂ ಇದೇ ತೀರ್ಪು ಬಂದ್ರೆ ಮುಚ್ಕೊಂಡು ಅದನ್ನು ಒಪ್ಪಬೇಕು ಎಂದು ಅವರು ಹೇಳಿದ್ದಾರೆ. ಬಂದ್ ಕರೆ ನೀಡಿದವರ ಮೇಲೆ ಸುಮೋಟೋ ಪ್ರಕರಣ ದಾಖಲಿಸಿ ಪರಪ್ಪನ ಅಗ್ರಹಾರ ಜೈಲಿಗೆ ಹಾಕಬೇಕು ಎಂದು ಸರ್ಕಾರಕ್ಕೆ ಅವರು ಆಗ್ರಹಿಸಿದ್ದರು.
ಅಲ್ಲದೆ, ಹೆಣ್ಣುಮಕ್ಕಳನ್ನು ಸಂಪ್ರದಾಯ ಪಾಲಿಸಬೇಕು ಎಂದು ಯಾಕೆ ಒತ್ತಾಯಪಡಿಸುತ್ತೀರಿ? ಅವರನ್ನು ಕೂಪಕ್ಕೆ ಯಾಕೆ ತಳ್ಳುತ್ತೀರಿ. ಅವರ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕಾದವರು ಇವತ್ತು ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೀರಿ ಎಂದು ವೀಡಿಯೋದಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಈ ಬಗ್ಗೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, " ಬೈರಪ್ಪ ನವರೇ ನಿಮ್ಮಿಂದ ಇದನ್ನು ನಿರೀಕ್ಷಿರಲಿಲ್ಲ. ಇಡೀ ಕರ್ನಾಟಕದ ಮುಸ್ಲಿಮರ ಬಗ್ಗೆ ತುಚ್ಛವಾಗಿ ಮಾತನಾಡಿದ ನಿಮಗೂ ಸಂಘಪರಿವಾರದವರಿಗೂ ವ್ಯತ್ಯಾಸವೇನೂ ಇಲ್ಲ. ಅಂದ ಹಾಗೆ ಕರ್ನಾಟಕ ಮತ್ತು ಕನ್ನಡವನ್ನು ಯಾರಿಗೂ ಬರೆದುಕೊಟ್ಟಿಲ್ಲ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭೈರಪ್ಪ ಅವರ ಲೈವ್ ವೀಕ್ಷಿಸಿದ ಕನ್ನಡಿಗರು ಹರೀಶ್ ಅವರು ಮುಸ್ಲಿಮರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಹೊರಿಸುವುದು ಕಂಡು ಅಚ್ಚರಿಪಟ್ಟಿದ್ದಾರೆ. “ಹರೀಶ್ ಕುಮಾರ್ ಭೈರಪ್ಪ ಅವರನ್ನು ಒಳ್ಳೆಯ ಹೋರಾಟಗಾರ ಎಂದುಕೊಂಡಿದ್ದೆವು. ಆದರೆ, ಲೈವ್‌ನಲ್ಲಿ ಬಂದು ಮುಸ್ಲಿಮರ ವಿರುದ್ಧ ಅಪಪ್ರಚಾರ ನಡೆಸಿದ್ದು ನೋಡಿ ಆಘಾತವಾಗಿದೆ. ಮುಸ್ಲಿಮರಿಗೆ ಕನ್ನಡ ಬರಲ್ಲ ಎಂದು ಹೇಳುವ ಭೈರಪ್ಪ ಅವರಿಗೆ ಕನ್ನಡಕ್ಕೆ ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ತಂದುಕೊಟ್ಟ ಬೊಳುವಾರು ಮಹಮ್ಮದ್ ಕುಂಞಿ ಅವರು ಕಂಡಿಲ್ಲವೇ, ಖ್ಯಾತ ಕವಿ ನಿಸಾರ್ ಅಹ್ಮದ್ ಬಗ್ಗೆ ತಿಳಿದಿಲ್ಲವೇ? ರಹಮತ್ ತರೀಕೆರೆ, ಪೀರ್ ಭಾಷಾ, ರಂಜಾನ್ ದರ್ಗಾ ಮೊದಲಾದ ಕನ್ನಡ ಚಿಂತಕರ ಬಗ್ಗೆ ಪರಿಚಯವಿಲ್ಲವೇ? ಮೊನ್ನೆ ಅಗಲಿದ ಇಬ್ರಾಹಿಂ ಸುತಾರ ಅವರನ್ನು ನೋಡಿ ನೀವು ಕನ್ನಡ ಕಲಿಯಿರಿ ಎಂದು ಭೈರಪ್ಪ ಅವರಿಗೆ ಹೇಳಲು ಸಾಧ್ಯವಿತ್ತೇ?” ಎಂದೆಲ್ಲಾ ಪ್ರಜ್ಞಾವಂತ ಕನ್ನಡಿಗರು ಪ್ರಶ್ನಿಸಿದ್ದಾರೆ.
ವಾರ್ತಾಭಾರತಿಗೆ ಸ್ಪಷ್ಟನೆ ನೀಡಿದ ಹರೀಶ್ ಕುಮಾರ್:
ಈ ಬಗ್ಗೆ ವಾರ್ತಾಭಾರತಿ ಭೈರಪ್ಪ ಹರೀಶ್ ಕುಮಾರ್ ರಿಗೆ ಕರೆ ಮಾಡಿ ಮಾತನಾಡಿದ್ದು, "ಈ ಸ್ಕ್ರೀನ್ ಶಾಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ನನ್ನ ಹೆಸರಿನಲ್ಲಿ ಮೂರು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಇದು ನನಗೆ ಸಂಬಂಧಪಟ್ಟಿಲ್ಲ. ನಾನು ಯಾವತ್ತೂ ಇಂತಹಾ ಪೋಸ್ಟ್ ಗಳನ್ನು ಮಾಡುವುದಿಲ್ಲ. ಯಾರೋ ನನ್ನಲ್ಲಿ ವಿರೋಧ ಕಟ್ಟಿಕೊಂಡಿರುವವರು ನಡೆಸಿದ ಕುತಂತ್ರವಿದು" ಎಂದು ಹೇಳಿಕೆ ನೀಡಿದ್ದಾರೆ.
ಬಳಿಕ ತಮ್ಮ ಲೈವ್ ವೀಡಿಯೋದ ಕುರಿತು ಮಾತನಾಡಿದ ಅವರು "ನಾನು ಯಾವತ್ತೂ ಮುಸಲ್ಮಾನರನ್ನು ವಿರೋಧಿಸಿಲ್ಲ. ನಾನು ಸಾಮಾನ್ಯ ಮುಸಲ್ಮಾನರನ್ನು ವಿರೋಧಿಸುವುದಿಲ್ಲ. ಮುಸ್ಲಿಮರಿಲ್ಲದೇ ಕರ್ನಾಟಕ ಅಪೂರ್ಣ. ನಾನು ಸಂಘಪರಿವಾರವನ್ನು ವಿರೋಧಿಸಿದಂತೆಯೇ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನು ವಿರೋಧಿಸುತ್ತೇನೆ. ಈ ಬಂದ್ ಅನ್ನು ಏಕಾಏಕಿ ನಡೆಸಲಾಗಿತ್ತು. ಸಮಾನಮನಸ್ಕ ಸಂಘಟನೆಗಳೊಂದಿಗೆ ಮಾತನಾಡಿ, ವಿಚಾರಗಳನ್ನು ಹಂಚಿಕೊಂಡು ಇನ್ನೂ ಉತ್ತಮವಾಗಿ ನಡೆಸಬಹುದಾಗಿತ್ತು. ಆ ಒಂದು ಕಳಕಳಿಯಿಂದ ಮಾತ್ರ ನಾನು ಈ ವೀಡಿಯೊದಲ್ಲಿ ಹೇಳಿದ್ದೇನೆಯೇ ಹೊರತು ಬೇರೇನೂ ಹೇಳಿಲ್ಲ. ನನಗೆ ಮುಸ್ಲಿಮರೊಂದಿಗೆ ಆಗಲಿ ತುಳಿತಕ್ಕೊಳಗಾದವರೊಂದಿಗಾಗಲೀ ಯಾವುದೇ ವಿರೋಧವಿಲ್ಲ. ನಾನು ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ" ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

(ನಕಲಿ ಎನ್ನಲಾದ ಫೇಸ್‌ಬುಕ್ ಪೋಸ್ಟ್ ಸ್ಕ್ರೀನ್ ಶಾಟ್)







