ಬಾಹ್ಯಾಕಾಶದಲ್ಲಿ ಉಪಗ್ರಹ ನಾಶ ಮಾಡಬಲ್ಲ ಲೇಸರ್ ಅಸ್ತ್ರ ನಿರ್ಮಿಸಿದ ಚೀನಾ : ವರದಿ

ತೈಪೆ, ಮಾ.19: ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ನಿಷ್ಕ್ರಿಯ ಅಥವಾ ನಾಶಮಾಡುವ ಸಾಮರ್ಥ್ಯವಿರುವ ರಿಲೇಟಿವಿಸ್ಟಿಕ್ ಕ್ಲಿಸ್ಟ್ರಾನ್ ಆ್ಯಂಪ್ಲಿಫಯರ್(ಆರ್‌ಕೆಎ) ಲೇಸರ್ ಅಸ್ತ್ರವನ್ನು ಚೀನಾದ ಸಂಶೋಧಕರು ಅಭಿವೃದ್ಧಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ನಾಗರಿಕ ಮತ್ತು ಸೇನೆಯ ಉದ್ದೇಶಕ್ಕೆ ಬಳಸಲಾಗುವ ಇಲೆಕ್ಟ್ರೊಮ್ಯಾಗ್ನೆಟಿಕ್ ತರಂಗಾಂತರದ ಒಂದು ಅಂಶವಾದ ಕೆಎ-ಬ್ಯಾಂಡ್‌ನ 5 ಮೆಗಾವ್ಯಾಟ್ ತರಂಗವನ್ನು ಈ ಸಾಧನ ಉತ್ಪಾದಿಸುತ್ತದೆ. ಆಗಸದಲ್ಲಿರುವ ಗುರಿಯನ್ನು ನೆಲದ ಮೇಲಿಂದ ನಾಶಗೊಳಿಸಲು ಈ ಲೇಸರ್ ಅಸ್ತ್ರದ ಸಾಮರ್ಥ್ಯ ಸಾಲದು. ಆದರೆ ಉಪಗ್ರಹದ ಮೇಲೆ ಆರ್‌ಕೆಎ ಅಸ್ತ್ರವನ್ನು ಇರಿಸಿ, ಬಾಹ್ಯಾಕಾಶದಲ್ಲಿರುವ ಶತ್ರುಗಳ ಉಪಗ್ರಹದ ಸೂಕ್ಷ್ಮ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ಸುಟ್ಟುಹಾಕಬಹುದು. ಇದರಿಂದ ಆ ಉಪಗ್ರಹ ಕ್ರಮೇಣ ನಾಶವಾಗುತ್ತದೆ ಎಂದು ಏಶ್ಯಾ ಟೈಮ್ಸ್ ಅನ್ನು ಉಲ್ಲೇಖಿಸಿ ತೈವಾನ್ ನ್ಯೂಸ್ ವರದಿ ಮಾಡಿದೆ. ನಿರ್ದೇಶಿತ ಶಕ್ತಿ ಆಯುಧ(ಡಿಇಡಬ್ಲ್ಯೂ)ಗಳಲ್ಲಿ ಶತ್ರುಗಳ ಸಾಧನಗಳನ್ನು ನಾಶಮಾಡಲು ಚಲನ ಶಕ್ತಿಯ ಬದಲು ಕೇಂದ್ರೀಕೃತ ಶಕ್ತಿಗಳನ್ನು ಬಳಸಲಾಗುತ್ತದೆ. ಆದರೆ ಆರ್‌ಕೆಎ ಅಸ್ತ್ರ ಡಿಇಡಬ್ಲ್ಯೂ ಅಸ್ತ್ರ ಎಂಬ ವರದಿಯನ್ನು ಚೀನಾ ನಿರಾಕರಿಸಿದ್ದರೂ, ಚೀನಾದ ಲೇಸರ್ ಅಸ್ತ್ರ ಲೋಹದ ವಸ್ತುಗಳನ್ನು ಛಿದ್ರಗೊಳಿಸುವ ಸಾಮರ್ಥ್ಯ ಹೊಂದಿದೆ. ನಾವು ಊಹಿಸದಷ್ಟು ಅಗಾಧ ಶಕ್ತಿಯನ್ನು ಈ ಲೇಸರ್ ಅಸ್ತ್ರ ಹೊಂದಿದೆ ಎಂದು ಬೀಜಿಂಗ್ ಮೂಲದ ವಿಜ್ಞಾನಿಗಳು, ಹೆಸರು ಬಹಿರಂಗಗೊಳಿಸಬಾರದು ಎಂಬ ಷರತ್ತು ಒಡ್ಡಿ, ಮಾಹಿತಿ ನೀಡಿದ್ದಾರೆ ಎಂದು ಪತ್ರಿಕೆಯ ವರದಿ ಹೇಳಿದೆ. ಬಾಹ್ಯಾಕಾಶ ಕ್ಷೇತ್ರವು ಇತ್ತೀಚಿನ ದಿನಗಳಲ್ಲಿ ನಿಕಟ ಪೈಪೋಟಿಯ ಭೌಗೋಳಿಕ ರಾಜಕೀಯ ಕ್ಷೇತ್ರವಾಗುತ್ತಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಕಕ್ಷೆಯ ಕೆಳಮಟ್ಟದಲ್ಲಿ ಹಾರಿಹೋಗಬಲ್ಲ ಪರಮಾಣು ಸಿಡಿತಲೆ ಹೊಂದಿನ ಹೈಪರ್‌ಸಾನಿಕ್ ವಾಹನವನ್ನು ಚೀನಾ ಯಶಸ್ವಿಯಾಗಿ ಪ್ರಯೋಗಿಸಿದೆ.





