ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಿಕ್ಷಣ ಸಚಿವರಲ್ಲಿ ಐಟಾ ಕರ್ನಾಟಕ ಮನವಿ

ಭಟ್ಕಳ: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಿಕ್ಷಕರ ಮತ್ತು ಶಿಕ್ಷಣ ಇಲಾಖೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳಿಗೆ ಕೂಡಲೆ ಪರಿಹಾರ ಕಂಡುಕೊಂಡು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.
ಶನಿವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಜರಿಗಿದ ಉತ್ತರಕನ್ನಡ ಜಿಲ್ಲಾ ಮಹಿಳಾ ಶಿಕ್ಷಕಿಯರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ರಿಗೆ ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(ರಿ) ‘ಐಟಾ’ವು ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನವನ್ನು ಉನ್ನತೀಕರಿಸಲು, ಅವರನ್ನು ಹೊಣೆಗಾರಿಕೆಗಳ ಕುರಿತು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದ ಅವರು, ಇದು ಶಿಕ್ಷಕ ಸಮುದಾಯದ ಒಂದು ಪ್ರಬಲ ಮತ್ತು ವಿಶ್ವಸನೀಯ ರಾಷ್ಟ್ರೀಯ ವೇದಿಕೆಯಾಗಿದೆ. ಇದರ ಮೂಲಭೂತ ಉದ್ದೇಶವು ಶಿಕ್ಷಕರಿಗೆ ಅವರ ಪರಮ ಗುರಿಯನ್ನು ನೆನಪಿಸಿ ಕೊಡುವುದು ಮತ್ತು ಅವರಲ್ಲಿ ಹೊಣೆಗಾರಿಕಾ ಪ್ರಜ್ಞೆಯನ್ನು ಹುಟ್ಟಿಸುವುದು; ಅಂತೆಯೇ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಮತ್ತು ಅವರ ಅರ್ಹ ಹಕ್ಕುಗಳಿಗಾಗಿ ಪರಿಶ್ರಮ ಪಡುವುದಾಗಿದೆ ಎಂದರು.







