ಕೆಲ ಸಿನೆಮದಿಂದ ಬದಲಾವಣೆಗೆ ಪ್ರೇರಣೆಯಾದರೆ ಕಾಶ್ಮೀರ್ ಫೈಲ್ಸ್’ ದ್ವೇಷ ಪ್ರಚೋದಿಸುತ್ತದೆ: ಜೈರಾಮ್ ರಮೇಶ್

Photo: Twitter/@Jairam_Ramesh
ಹೊಸದಿಲ್ಲಿ, ಮಾ.19: ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್ ಸಿನೆಮ ದ್ವೇಷವನ್ನು ಪ್ರಚೋದಿಸುತ್ತದೆ ಮತ್ತು ಸಿನೆಮದಲ್ಲಿ ಕ್ರೋಧ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಇತಿಹಾಸವನ್ನು ವಿರೂಪಗೊಳಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಶನಿವಾರ ಹೇಳಿದ್ದಾರೆ.
ಕೆಲವು ಸಿನೆಮಗಳು ಬದಲಾವಣೆಗೆ ಪ್ರೇರಣೆಯಾಗುತ್ತವೆ. ಸತ್ಯವು ನ್ಯಾಯ, ಪುನರ್ವಸತಿ, ಸಮನ್ವಯ ಮತ್ತು ಶಾಂತಿಗೆ ಕಾರಣವಾಗಬಹುದು. ಆದರೆ ಪ್ರಚಾರ ಉದ್ದೇಶದ ಕೃತ್ಯವು ವಾಸ್ತವವನ್ನು ತಿರುಚುತ್ತದೆ, ಇತಿಹಾಸವನ್ನು ವಿರೂಪಗೊಳಿಸಿ ಕ್ರೋಧ ಮತ್ತು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಮುತ್ಸದ್ದಿಗಳು ಗಾಯಗಳನ್ನು ವಾಸಿ ಮಾಡುತ್ತಾರೆ, ಆದರೆ ಪ್ರಚಾರಕರು ಪೂರ್ವಾಗ್ರಹ ಮತ್ತು ಭಯದ ಲಾಭವನ್ನು ವಿಭಜಿಸಿ ಆಳ್ವಿಕೆ ನಡೆಸಲು ಬಳಸಿಕೊಳ್ಳುತ್ತಾರೆ ಎಂದವರು ಟ್ವೀಟ್ ಮಾಡಿದ್ದಾರೆ. ಮಾರ್ಚ್ 11ರಂದು ಬಿಡುಗಡೆಯಾದ ಕಾಶ್ಮೀರ್ ಫೈಲ್ಸ್ ಸಿನೆಮ ವಿವಾದದ ಕೇಂದ್ರ ಬಿಂದುವಾಗಿದೆ. ಬಿಜೆಪಿ ಪಕ್ಷ ಸಿನೆಮವನ್ನು ಶ್ಲಾಘಿಸಿದ್ದರೆ ವಿರೋಧ ಪಕ್ಷದವರು ಸಿನೆಮದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ, ತ್ರಿಪುರ, ಗೋವಾ, ಹರ್ಯಾನ, ಗುಜರಾತ್, ಉತ್ತರಾಖಂಡ ಸಹಿತ ಹಲವು ರಾಜ್ಯಗಳಲ್ಲಿ ಸಿನೆಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ.





