ಕಂಬಳ, ಯಕ್ಷಗಾನ, ಭೂತಾರಾಧನೆ ಕರಾವಳಿ ಭಾಗದ ಜನಪದ ಕ್ರೀಡೆ-ಸಿದ್ದರಾಮಯ್ಯ

ಪುತ್ತೂರು: ಕಂಬಳ, ಯಕ್ಷಗಾನ ಮತ್ತು ಭೂತಾರಾಧನೆಯು ಕರಾವಳಿ ಭಾಗದ ಜನಪದ ಕ್ರೀಡೆಯಾಗಿದ್ದು, ಈ ಕ್ರೀಡೆಗಳು ಜನರ ನಡುವೆ ಬೆಳೆದು ಬಂದಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಪ್ರೊತ್ಸಾಹ ಅಗತ್ಯ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶನಿವಾರ ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದಲ್ಲಿರುವ ದೇವರ ಮಾರು ಗದ್ದೆಯಲ್ಲಿ ನಡೆಯುತ್ತಿರುವ 29ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂಬಳವು ರೋಮಾಂಚನಕಾರಿ ಕ್ರೀಡೆಯಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಜನಪ್ರಿಯವಾಗಿದೆ ಈ ಕ್ರೀಡೆಯು ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿದೆ. ಇಂದಿನ ಕಂಬಳದಲ್ಲಿ ಸೇರಿರುವ ಅಪಾರ ಜನಸ್ತೋಮವೇ ಕಂಬಳದ ಅಭಿಮಾನಕ್ಕೆ ಸಾಕ್ಷಿಯಾಗಿದೆ. ತಮಿಳು ನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯಾದರೆ ಇಲ್ಲಿ ಕಂಬಳ ಕ್ರೀಡೆಯಿದೆ. ಆದರೆ ಜಲ್ಲಿಕಟ್ಟು ಕ್ರೀಡೆಯು ಅಪಾಯಕಾರಿಯಾಗಿದ್ದು ಇದರಿಂದ ಹಲವು ಮಂದಿ ಸಾವಿಗೀಡಾಗುತ್ತಾರೆ. ಆದರೆ ಕಂಬಳವು ಅಪಾಯಕಾರಿಯಲ್ಲದ ಕ್ರೀಡೆಯಾಗಿ ಬೆಳೆದಿದೆ ಎಂದರು.
ಐತಿಹಾಸಿಕ ವೀರಪುರುಷರಾದ ಕೋಟಿ-ಚೆನ್ನಯರ ಹೆಸರಿನಲ್ಲಿ ಈ ಕ್ರೀಡೆ ನಡೆಯುತ್ತಿರುವುದು ಸಂತಸದ ವಿಚಾರ ಎಂದ ಅವರು ಕೋಟಿ-ಚೆನ್ನಯರ ಹುಟ್ಟೂರಿನ ಅಭಿವೃದ್ಧಿಗೆ ತಾನು ಮುಖ್ಯಮಂತ್ರಿಯಾಗಿದ್ದ ವೇಳೆ ರೂ. 5 ಕೋಟಿ ಅನುದಾನ ಮಂಜೂರು ಮಾಡಿರುವುದನ್ನು ಸ್ಮರಿಸಿಕೊಂಡರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರವ ನಾರಾಯಣ ಅವರು ಮಾತನಾಡಿ, ದ.ಕ ಮತ್ತು ಉಡುಪಿ ಜಿಲ್ಲೆಯ ಜನತೆ, ರೈತಾಪಿ ವರ್ಗದ ಜನತೆ ಇಷ್ಟಪಡುವ ಅತ್ಯಂತ ಶಿಸ್ತಿನಿಂದ ಕೂಡಿದ ಕ್ರೀಡೆ ಕಂಬಳ ಎಂದರು.
ಚಿತ್ರ ನಟ ವಿಜಯ ರಾಘವೇಂದ್ರ ಅವರು ಮಾತನಾಡಿ ಕಂಬಳ ಒಂದು ತಪಸ್ಸು, ಅದರಲ್ಲಿ ಬಹಳಷ್ಟು ಶಕ್ತಿ ಅಡಗಿದೆ ಎಂದರು. `ಮೋಕೆದ ಸಿಂಗಾರಿ, ಉಂತುದೆ ವಯ್ಯಾರೆ' ತುಳು ಹಾಡನ್ನು ಹಾಡಿ ಸಭಿಕರನ್ನು ಅವರು ರಂಜಿಸಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ಶಾಸಕರಾದ ಬೈರತಿ ಸುರೇಶ್, ಬಸವರಾಜ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ,ಪಿ.ಎಂ.ಅಶೋಕ್,ಶ್ರೀನಿವಾಸ್,ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ, ಅಖಿಲ ಭಾರತ ಇಂಟೆಕ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ ಮತ್ತಿತರರು ಅತಿಥಿಗಳಾಗಿದ್ದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ ಅಮೈ ಮತ್ತು ಕಂಬಳ ಕ್ಷೇತ್ರದ ಸಾಧಕ ಕೇಶವ ಭಂಡಾರಿ ಕೈಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಒಕ್ಕಲಿಗ ಗೌಡ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಅವರನ್ನು ಗೌರವಿಸಲಾಯಿತು.
ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಂಚಾಲಕ ಎನ್.ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷ ವಸಂತಕುಮಾರ್ ರೈ ದುಗ್ಗಳ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯಕುಮಾರ್ ಸೊರಕೆ ಸ್ವಾಗತಿಸಿದರು, ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ನಿರೂಪಿಸಿದರು.