ನ್ಯಾಯ ಮರುಸ್ಥಾಪನೆಯ ಉದ್ದೇಶದ ಅರ್ಥಪೂರ್ಣ ಮಾತುಕತೆಗೆ ಉಕ್ರೇನ್ ಆಗ್ರಹ
ಹೊಸದಿಲ್ಲಿ, ಮಾ.19: ರಶ್ಯವು ಉದ್ದೇಶಪೂರ್ವಕವಾಗಿ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ವಾಯುದಾಳಿ ಮುಂದುವರಿಸುವ ಮೂಲಕ ಯುದ್ಧಾಪರಾಧ ಎಸಗಿದೆ ಎಂದು ಉಕ್ರೇನ್ ಆರೋಪಿಸಿದ್ದು ಅರ್ಥಪೂರ್ಣ ಮಾತುಕತೆಯ ಮೂಲಕ ನ್ಯಾಯ ಮರುಸ್ಥಾಪನೆಯ ಸಮಯ ಈಗ ಬಂದಿದೆ ಎಂದಿದೆ.
ಈ ಮಧ್ಯೆ, ಉಕ್ರೇನ್ ಮೇಲಿನ ರಶ್ಯ ಆಕ್ರಮಣ ಆರಂಭವಾದಂದಿನಿಂದ 3.25 ಮಿಲಿಯನ್‌ಗೂ ಅಧಿಕ ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ವರದಿ ಮಾಡಿದೆ. ರಶ್ಯ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ:
ಉಕ್ರೇನ್ ವಿರುದ್ಧದ ಕದನದಲ್ಲಿ ಇದೇ ಪ್ರಥಮ ಬಾರಿಗೆ ರಶ್ಯವು ತನ್ನ ಅತ್ಯಾಧುನಿಕ ಕಿಂಝಾಲ್ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿದೆ. ಉಕ್ರೇನ್‌ನ ಪಶ್ಚಿಮದ ಇವಾನೊ-ಫ್ರಾಂಕಿವ್ಸ್ಕ್ ಪ್ರಾಂತದ ಡೆಲಿಯಟಿನ್ ಗ್ರಾಮದಲ್ಲಿ ಕ್ಷಿಪಣಿ ಹಾಗೂ ವಾಯುದಾಳಿಯಲ್ಲಿ ಬಳಸುವ ಮದ್ದುಗುಂಡುಗಳನ್ನು ಶೇಖರಿಸಿಟ್ಟಿದ್ದ ಭೂಗತ ಗೋದಾಮಿನ ಮೇಲೆ ಕಿಂಝಾಲ್ ಹೈಪರ್‌ಸಾನಿಕ್ ಏರೊಬಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿ ಅದನ್ನು ಧ್ವಂಸಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ರಶ್ಯದೊಂದಿಗೆ ಸಮಗ್ರ ಶಾಂತಿ ಮಾತುಕತೆ ನಡೆಯಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆಗ್ರಹಿಸಿದ್ದಾರೆ. ಉಕ್ರೇನ್‌ಗೆ ನ್ಯಾಯ ಒದಗಿಸಲು ಮತ್ತು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಸ್ಥಾಪಿಸುವ ಸಮಯ ಈಗ ಬಂದಿದೆ. ಇಲ್ಲದಿದ್ದರೆ ಯುದ್ಧದಿಂದ ಆಗಿರುವ ನಷ್ಟದಿಂದ ಚೇತರಿಸಿಕೊಳ್ಳಲು ರಶ್ಯಕ್ಕೆ ಹಲವು ತಲೆಮಾರುಗಳೇ ಬೇಕಾಗಬಹುದು ಎಂದವರು ಹೇಳಿದ್ದಾರೆ.
ದಕ್ಷಿಣದ ನಗರ ಝಪೊರಿಝಿಯಾದಲ್ಲಿ ಉಕ್ರೇನ್ ಸೇನೆ 38 ಗಂಟೆಗಳ ಕರ್ಫ್ಯೂ ಜಾರಿಗೊಳಿಸಿದೆ. ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸೋಮವಾರ ಬೆಳಗ್ಗಿನವರೆಗೆ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ನಗರದ ಉಪಮೇಯರ್ ಅನಾಟೊಲಿ ಕುರ್ತ್ಯೆವ್ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯವನ್ನು ಬೆಂಬಲಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಆಕ್ರಮಣವನ್ನು ಖಂಡಿಸುವ ಯಾವುದೇ ಹೇಳಿಕೆಯನ್ನು ಚೀನಾ ಇದುವರೆಗೆ ನೀಡಿಲ್ಲ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ರಶ್ಯದ ಬಾಂಬ್ ದಾಳಿಯಲ್ಲಿ ಕುಸಿದುಬಿದ್ದಿರುವ ಉಕ್ರೇನ್‌ನ ನಾಟಕಶಾಲೆಯ ಕಟ್ಟಡದ ಅವಶೇಷಗಳಡಿ ಸಿಕ್ಕಿಬಿದ್ದಿರಬಹುದಾದ ನೂರಾರು ನಾಗರಿಕರನ್ನು ರಕ್ಷಿಸುವ ಕಾರ್ಯ ಶನಿವಾರವೂ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಝೋವ್ ಸಮುದ್ರದ ದಡದಲ್ಲಿರುವ ಪ್ರಮುಖ ಬಂದರು ನಗರದ ಮರಿಯುಪೋಲ್‌ಗೆ ಮುತ್ತಿಗೆ ಹಾಕಿರುವ ರಶ್ಯ ಸೇನೆ ನಗರಕ್ಕೆ ದಿಗ್ಬಂಧನ ವಿಧಿಸಿರುವುದರಿಂದ ಅಝೋವ್ ಸಮುದ್ರದ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಉಕ್ರೇನ್‌ನ ರಕ್ಷಣಾ ಇಲಾಖೆ ಹೇಳಿದೆ.
ಉಕ್ರೇನ್‌ನಲ್ಲಿ ನಾಗರಿಕರ ಸಾವುನೋವುಗಳನ್ನು ತಪ್ಪಿಸಲು ರಶ್ಯ ಗರಿಷ್ಟ ಪ್ರಯತ್ನ ನಡೆಸುತ್ತಿದೆ. ಆದರೆ ಕೀವ್ ಆಡಳಿತ ಯುದ್ಧಾಪರಾಧ ಎಸಗುತ್ತಿದೆ ಎಂದು ರಶ್ಯದ ಅಧ್ಯಕ್ಷ ಪುಟಿನ್ , ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮಾಕ್ರನ್ ಜತೆಗಿನ ದೂರವಾಣಿ ಸಂಭಾಷಣೆ ಸಂದರ್ಭ ಪ್ರತಿಪಾದಿಸಿದ್ದಾರೆ. ಮರಿಯುಪೋಲ್ ನಗರಕ್ಕೆ ರಶ್ಯನ್ ಸೇನೆ ಮುತ್ತಿಗೆ ಹಾಕಿದ ಬಳಿಕ ಅಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಮಾಕ್ರನ್ ತೀವ್ರ ಕಳವಳ ವ್ಯಕ್ತಪಡಿಸಿ, ತಕ್ಷಣ ಮುತ್ತಿಗೆ ವಾಪಾಸು ಪಡೆಯುವಂತೆ ರಶ್ಯ ಅಧ್ಯಕ್ಷರಿಗೆ ಕರೆ ನೀಡಿದರು ಎಂದು ವರದಿಯಾಗಿದೆ.
ಉಕ್ರೇನ್ ಯುದ್ಧದ ಕಾರಣದಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್ ಹಾಗೂ ಇತರ ಪ್ರಮುಖ ಅಂತರಾಷ್ಟ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಅಲ್ಲದೆ ಯುದ್ಧದಿಂದಾಗಿ ವಿನಾಶಕಾರಿ ಮಾನವೀಯ ದುರಂತದ ಪರಿಸ್ಥಿತಿ ಉಂಟಾಗಲಿದೆ ಎಂದು ಆತಂಕ ಸೂಚಿಸಿದೆ.
ಉಕ್ರೇನ್ ಮೇಲೆ ರಶ್ಯ ಆಕ್ರಮಣ ಮಾಡಿರುವುದನ್ನು ಖಂಡಿಸಿ ರಶ್ಯದ 10 ರಾಜತಾಂತ್ರಿಕರನ್ನು ಉಚ್ಛಾಟನೆ ಮಾಡಿರುವುದಾಗಿ 3 ಬಾಲ್ಟಿಕ್ ದೇಶಗಳಾಶದ ಎಸ್ಟೋನಿಯಾ, ಲಾತ್ವಿಯಾ ಮತ್ತು ಲಿಥ್ವೇನಿಯಾ ದೇಶಗಳು ಘೋಷಿಸಿವೆ.
ರಶ್ಯದ ಆಕ್ರಮಣದ ಬಳಿಕ ಉಕ್ರೇನ್‌ನಿಂದ 3.25 ಮಿಲಿಯನ್‌ಗೂ ಅಧಿಕ ನಿರಾಶ್ರಿತರು ದೇಶದಿಂದ ಪಲಾಯನ ಮಾಡಿರುವುದಾಗಿ ವಿಶ್ವಸಂಸ್ಥೆ ಹೇಳಿದೆ. ಇವರಲ್ಲಿ 2 ಮಿಲಿಯನ್‌ಗೂ ಅಧಿಕ ಮಂದಿ ನೆರೆಯ ಪೋಲ್ಯಾಂಡ್‌ಗೆ ವಲಸೆ ಹೋಗಿದ್ದಾರೆ ಎಂದು ವರದಿ ಹೇಳಿದೆ.







