ಕೇರಳ: ಸಿಲ್ವರ್ ಲೈನ್ ಯೋಜನೆಯ ವಿರುದ್ಧ ಮುಂದುವರಿದ ಪ್ರತಿಭಟನೆ
ಯೋಜನೆಯಿಂದ ಸರಕಾರ ಹಿಂದೆ ಸರಿಯದು: ಎಂದ ಸಿಎಂ ಪಿಣರಾಯಿ

ತಿರುವನಂತಪುರ,ಮಾ.19: ಎಡರಂಗ ಸರಕಾರದ ಮಹತ್ವಾಕಾಂಕ್ಷೆಯ ಸಿಲ್ವರ್ ಲೈನ್ ರೈಲು ಕಾರಿಡಾರ್ ಯೋಜನೆಯ ವಿರುದ್ಧ ಕೇರಳದ ವಿವಿಧೆಡೆ ವ್ಯಾಪಕ ಪ್ರತಿಭಟನೆ ಮುಂದುವರಿದಿರುವಂತೆಯೇ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಗ್ಗೆ ಶನಿವಾರ ಹೇಳಿಕೆ ನೀಡಿದ್ದು, ಬಹುಕೋಟಿ ವೆಚ್ಚದ ಈ ಉಪಕ್ರಮವು ಜನತೆಯ ಬೆಂಬಲದೊಂದಿಗೆ ಈ ಹಿಂದೆ ಘೋಷಿಸಿದಂತೆ ಜಾರಿಗೊಳಿಸಲಾಗುವುದೆಂದು ಹೇಳಿದ್ದಾರೆ.
ಸಿಲ್ವರ್ ಲೈನ್ ಯೋಜನೆಗಾಗಿ ಸರ್ವೇ ಕಲ್ಲುಗಳನ್ನು ಸ್ಥಾಪಿಸುವುದರ ವಿರುದ್ಧ ಕೇರಳದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಅವರು ಖಂಡಿಸಿದರು. ಇಂತಹ ಪ್ರತಿಭಟನೆಗಳು ಪ್ರದೇಶದ ಅಭಿವೃದ್ಧಿಗೆ ವಿರುದ್ಧವಾದುದಾಗಿದೆ ಹಾಗೂ ಸರಕಾರವು ಘೋಷಿಸಿದ ಯಾವುದೇ ಯೋಜನೆಗಳು ಕೇವಲ ಕಡತದಲ್ಲೇ ಉಳಿಯುವಂತಾಗಬಾರದು ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿಯು ರಾಜ್ಯದ ಪ್ರಗತಿಗೆ ವಿರುದ್ಧವಾದ ನಿಲುವನ್ನು ಅಳವಡಿಸಿಕೊಂಡಿದೆ. ಆದರೆ ಅವುಗಳ ದುರುದ್ದೇಶದ ಬಗ್ಗೆ ಶ್ರೀಸಾಮಾನ್ಯರು ಜಾಗೃತರಾಗಿರಬೇಕೆಂದು ವಿಜಯನ್ ಎಚ್ಚರಿಕೆ ನೀಡಿದರು. ಸರಕಾರವು ಯಾವುದೇ ಯೋಜನೆಗಳನ್ನು ಘೋಷಿಸಿದರೂ, ಅವುಗಳನ್ನು ಜನತೆಯ ಬೆಂಬಲದೊಂದಿಗೆ ಜಾರಿಗೊಳಿಸಲಾಗುವುದು ಎಂದರು.
ಆದಾಗ್ಯೂ, ಸಿಲ್ವರ್‌ಲೈನ್ ಯೋಜನೆಗೆ ಅವಕಾಶ ನೀಡದಿರುವ ತಮ್ಮ ನಿಲುವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ ಪುನರುಚ್ಚರಿಸಿವೆ. ಈ ಯೋಜನೆಯ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ಶ್ರೀಸಾಮಾನ್ಯರನ್ನು ತಾನು ಬೆಂಬಲಿಸುವುದಾಗಿ ಹೇಳಿವೆ.
ಸಿಲ್ವರ್ ಲೈನ್ ಯೋಜನೆಯ ವಿರುದ್ಧ ಪ್ರತಿಭಟನೆಯನ್ನು ಯುಡಿಎಫ್ ಮೈತ್ರಿಕೂಟ ಕೈಗೆತ್ತಿಕೊಂಡಿರುವುದಾಗಿ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ವಿ.ಡಿ.ಸತೀಶನ್ ತಿಳಿಸಿದ್ದಾರೆ. ಈ ಯೋಜನೆಯ ಅಂಗವಾಗಿಅಧಿಕಾರಿಗಳು ಅಳವಡಿಸಿರುವ ಸರ್ವೇ ಕಲ್ಲುಗಳನು ಕಿತ್ತುಹಾಕುವ ಕೆಲಸವನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
‘‘ಇಂತಹ ಯೋಜನೆಯು ಅನುಷ್ಠಾನಗೊಳ್ಳುವುದಕ್ಕೆ ರಾಜ್ಯದ ಜನತೆ ಆಸ್ಪದ ನೀಡುವುದಿಲ್ಲ. ನಾವು ಜನಸಾಮಾನ್ಯರ ಜೊತೆಗಿದ್ದೇವೆ. ನಮ್ಮ ಹೋರಾಟ ಮುಂದುವರಿಯಲಿದೆ’’ ಎಂದವರು ಸುದ್ದಿಗಾರರಿಗೆ ತಿಳಿಸಿದರು
ಸಿಲ್ವರ್ ಲೈನ್ ಯೋಜನೆಯ ವಿರುದ್ಧ ಎರಡು ದಿನಗಳ ಹಿಂದೆ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾದ ಕೊಟ್ಟಾಯಂ ಜಿಲ್ಲೆಯ ಮಡಪ್ಪಳ್ಳಿಗೆ ಕೇಂದ್ರ ಸಚಿವ ವಿ. ಮುರಳೀಧರನ್ ಶನಿವಾರ ಭೇಟಿ ನೀಡಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಈ ಯೋಜನೆಯ ಜಾರಿಗೆ ಕೇಂದ್ರ ಸರಕಾರವು ಯಾವುದೇಅನುಮತಿಯನ್ನು ನೀಡಿಲ್ಲವೆಂದು ಹಿರಿಯ ಬಿಜೆಪಿ ನಾಯಕರೂ ಆಗಿರುವ ವಿ.ಮುರಳೀಧರನ್ ಅವರು ಸ್ಥಳೀಯರಿಗೆ ತಿಳಿಸಿದರು.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ವಿರುದ್ಧ ಪೊಲೀಸರ ಕಾರ್ಯಾಚರಣೆಯನ್ನು ಬಲವಾಗಿ ಖಂಡಿಸಿದ ಅವರು ಪ್ರಜಾಪ್ರಭುತ್ವವಾದಿ ರಾಷ್ಟ್ರವಾದ ಭಾರತದಲ್ಲಿ ಯಾರೂ ಕೂಡಾ ಈ ಯೋಜನೆಯನನು ಹಿಂಸಾ ಮಾರ್ಗದ ಮೂಲಕವಾಗಿ ಜಾರಿಗಳಿಸಬಾರದು ಎಂದರು.
ಈ ಮಧ್ಯೆ ಮಲಪ್ಪುರಂ ಜಿಲ್ಲೆಯ ತಿರೂರು ಹಾಗೂ ಎರ್ನಾಕುಲಂ ಜಿಲ್ಲೆಯ ಚೋಟ್ಟಾನಿಕರದಲ್ಲಿಯೂ ಸಿಲ್ವರ್‌ಲೈನ್ ಯೋಜನೆಯ ವಿರುದ್ಧ ಶನಿವಾರ ಪ್ರತಿಭಟನೆಗಳು ನಡೆದಿರುವುದಾಗಿ ವರದಿಯಾಗಿವೆ. ಯೋಜನೆಗಾಗಿ ಸರ್ವೆಕಲ್ಲುಗಳನ್ನು ಸ್ಥಾಪಿಸಲು ಆಗಮಿಸಿದ ರೈಲು ಅಧಿಕಾರಿಗಳ ವಿರುದ್ಧ ಮಹಿಳೆಯರು ಸೇರಿದಂತೆ ಭಾರೀ ಸಂಖ್ಯೆಯ ಮಂದಿ ಪ್ರತಿಭಟನೆ ನಡೆಸಿದರು.







