ಕುಂದಾಪುರ: ಕೊಡಲಿಯಿಂದ ಕೊಚ್ಚಿ ಮಗನಿಂದಲೇ ತಂದೆಯ ಕೊಲೆ
ಜಾಗದ ವಿಚಾರದಲ್ಲಿ ತಕರಾರು: ಆರೋಪಿಯ ಬಂಧನ

ನರಸಿಂಹ ಮರಕಾಲ(ಎಡಚಿತ್ರ), ರಾಘವೇಂದ್ರ ತೋಳಾರ್
ಕುಂದಾಪುರ, ಮಾ.೨೦: ಕ್ಷುಲ್ಲಕ ಕಾರಣಕ್ಕಾಗಿ ಮಗ ತನ್ನ ತಂದೆಯನ್ನೇ ಕೈ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಮಾ.19ರಂದು ರಾತ್ರಿ 9ಗಂಟೆ ಸುಮಾರಿಗೆ ಕೋಟೇಶ್ವರ ಸಮೀಪದ ಪಡುಗೋಪಾಡಿ ಎಂಬಲ್ಲಿ ನಡೆದಿದೆ.
ಪಡುಗೋಪಾಡಿಯ ನರಸಿಂಹ ಮರಕಾಲ(72) ಕೊಲೆಗೀಡಾಗಿದ್ದು, ಕೊಲೆ ಆರೋಪಿ ಮೃತರ ಮಗ ರಾಘವೇಂದ್ರ ತೋಳಾರ್(36) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ನರಸಿಂಹ ದಂಪತಿಯ ಐವರು ಮಕ್ಕಳಲ್ಲಿ ರಾಘವೇಂದ್ರ ಕಿರಿಯವ ನಾಗಿದ್ದು, ಅವಿವಾಹಿತನಾಗಿ ಗ್ಯಾರೇಜ್ನಲ್ಲಿ ದುಡಿಯುತ್ತಿದ್ದನು. ರಾಘವೇಂದ್ರ ಮನೆಯ ಒಂದು ಭಾಗದಲ್ಲಿ ಪ್ರತ್ಯೇಕವಾಗಿ ವಾಸವಿದ್ದು, ತಂದೆ ಜೊತೆ ಜಾಗದ ವಿಚಾರದಲ್ಲಿ ಕಳೆದ 9ವರ್ಷ ಗಳಿಂದ ತಕರಾರು ಮಾಡಿಕೊಂಡು, ದ್ವೇಷದಿಂದ ಜಗಳ ಮಾಡುತ್ತಿದ್ದನು. ಅಲ್ಲದೆ ತಂದೆಯನ್ನು ಕೊಲೆ ಮಾಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದನು ಎಂದು ದೂರಲಾಗಿದೆ.
ಮಾ.19ರಂದು ರಾತ್ರಿ ರಾಘವೇಂದ್ರ ಮನೆಯ ಅಂಗಳದಲ್ಲಿ ಕಸಕಡ್ಡಿಗೆ ಬೆಂಕಿ ಹಾಕಿದ್ದು, ಅದರ ಪಕ್ಕದಲ್ಲಿಯೇ ದನದ ಕೊಟ್ಟಿಗೆ, ಹುಲ್ಲು ರಾಶಿ ಇದ್ದ ಕಾರಣ ನರಸಿಂಹ ಮರಕಾಲ ಬೆಂಕಿಗೆ ನೀರು ಹಾಕಿ ಆರಿಸಲು ಹೋದರು. ಆಗ ರಾಘವೇಂದ್ರ, ತನ್ನ ತಂದೆಗೆ ಅವಾಚ್ಯವಾಗಿ ಬೈದು, ಮನೆಯ ಒಳಗಡೆ ಇದ್ದ ಕಬ್ಬಿಣದ ಕೊಡಲಿಯಿಂದ ತಂದೆಯ ತಲೆಗೆ ಕಡಿದನು ಎಂದು ದೂರಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ನರಸಿಂಹ ಮರಕಾಲ ರಾತ್ರಿ ೧೧ಗಂಟೆ ಸುಮಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ವೇಳೆ ಕೃತ್ಯ ತಡೆಯಲು ಬಂದ ಸಹೋದರಿ ಸುಜಾತ ಅವರಿಗೂ ರಾಘವೇಂದ್ರ ಕೊಡಲಿಯಿಂದ ಹಲ್ಲೆ ನಡೆಸಿದ್ದು, ಇದರಿಂದ ಗಾಯಗೊಂಡ ಸುಜಾತ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ದ್ದಾರೆ. ಕೊಲೆ ಬಳಿಕ ಮನೆ ಸಮೀಪವೇ ಇದ್ದ ಆರೋಪಿ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದರು.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ, ಎಸ್ಸೈ ಸದಾಶಿವ ಗವರೋಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









