ಹನೂರು: ರಸ್ತೆ ಬದಿಗೆ ಉರುಳಿದ ಬಸ್; 7 ಮಂದಿಗೆ ಗಾಯ

ಹನೂರು, ಮಾ.20: ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನವೊಂದರ ನಡುವೆ ಅಪಘಾತ ಸಂಭವಿಸಿ, ಬಸ್ ರಸ್ತೆ ಬದಿಯ ಗುಂಡಿಗೆ ಉರುಳಿಬಿದ್ದ ಘಟನೆ ಹನೂರು ಸಮೀಪದ ಮಂಗಲ ಹಾಗೂ ಕಾಮಗೆರೆ ಮಾರ್ಗಮಧ್ಯೆ ರವಿವಾರ ಸಂಭವಿಸಿರುವುದು ವರದಿಯಾಗಿದೆ.
ಘಟನೆಯಲ್ಲಿ ಆರು ಮಂದಿ ಬಸ್ ಪ್ರಯಾಣಿಕರು ಮತ್ತು ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಲೆಮಹದೇಶ್ವರ ಬೆಟ್ಟ ಮುಖೇನಾ ಆಗಮಿಸಿದ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅವಘಡ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಹೊಂಡಕ್ಕೆ ಉರುಳಿಬಿದ್ದಿದೆ ಎಂದು ಹೇಳಲಾಗಿದೆ.










