ರಾಜ್ಯಾದ್ಯಂತ ಮಾ.31ರ ವರೆಗೆ ನೋಂದಣಿ ಕಚೇರಿ ರಾತ್ರಿ 8 ಗಂಟೆ ವರೆಗೆ ಕಾರ್ಯ ನಿರ್ವಹಣೆ

ಬೆಂಗಳೂರು, ಮಾ. 20: ರಾಜ್ಯಾದ್ಯಂತ ಉಪ ನೋಂದಣಿ ಕಚೇರಿಗಳ ಕೆಲಸದ ವೇಳೆಯನ್ನು ಇದೇ ಮಾ.31ರ ವರೆಗೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ರ ವರೆಗೂ ವಿಸ್ತರಣೆ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ 10ರಿಂದ ಸಂಜೆ 5:30ರ ವರೆಗೂ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಅದನ್ನು ಬದಲಿಸಿ, ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೂ ಕಚೇರಿ ಅವಧಿ ವಿಸ್ತರಣೆ ಮಾಡಿ 2022ರ ಫೆಬ್ರವರಿ 15ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಕೆಲಸದ ಅವಧಿಯನ್ನು ವಿಸ್ತರಿರಣೆ ಮಾಡಿ ಆದೇಶಿಸಲಾಗಿದೆ.
ಮಾ.26ರ ನಾಲ್ಕನೆ ಶನಿವಾರವೂ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‍ಮೆಂಟ್, ಫ್ಲ್ಯಾಟ್ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಗೆ ಮುದ್ರಾಂಕ ಶುಲ್ಕ ನಿಗದಿಗೆ ಮಾರ್ಗಸೂಚಿ ದರದ ಶೇ.10ರಷ್ಟು ರಿಯಾಯಿತಿ ನೀಡಿರುವ ಆದೇಶವು ಮಾ.31ರ ವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Next Story





