ಸಾಹಿತ್ಯ, ಸಂಸ್ಕೃತಿ ಸಂಭ್ರಮಾಚರಣೆ ಆರೋಗ್ಯಕರ ಸಮಾಜದ ಹೆಗ್ಗುರುತು: ಟಿ.ವಿ. ಮೋಹನದಾಸ ಪೈ
ಮಂಗಳೂರು, ಮಾ.೨೦: ಒಂದು ಸಮಾಜ ಮುಂದುವರೆದ ಸಮಾಜವೆನ್ನಿಸಿಕೊಳ್ಳಬೇಕಾದರೆ ತನ್ನ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಅದಕ್ಕಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲುವ ಕೆಲಸ ಮಾಡಬೇಕು ಎಂದು ಕೊಂಕಣಿ ಮುಂದಾಳು ಟಿ.ವಿ.ಮೋಹನದಾಸ್ ಪೈ ಅಭಿಪ್ರಾಯಿಸಿದರು.
ಅವರು ಇಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ವಿಶ್ವಕೊಂಕಣಿ ಕೇಂದ್ರ ವತಿಯಿಂದ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು ವಿವಿ ಕೊಂಕಣಿ ಅಧ್ಯಯನ ಪೀಠ, ಕವಿತಾ ಟ್ರಸ್ಟ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂಭ್ರಮದ ವಾರ್ಷಿಕ ಉತ್ಸವ ‘ವಿಶ್ವ ಕೊಂಕಣಿ ಸಮಾರೋಹ’ ಹಾಗೂ ವಿಶ್ವಕೊಂಕಣಿ ಪ್ರಶಸ್ತಿ ಪ್ರದಾನ-2021 ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿಗಳು ಸಮುದಾಯದ ಉನ್ನತಿಗೆ ಕೊಡುಗೆ ನೀಡುತ್ತದೆ. ಆದ್ದರಿಂದಲೇ ಕಳೆದ 12 ವರ್ಷಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದವರನ್ನು ಸನ್ಮಾನಿಸಲಾಗುತ್ತಿದೆ. ಕೊಂಕಣಿ 20 ಲಕ್ಷ ಜನ ಸಂಖ್ಯೆಯ ಇರುವ ಸಣ್ಣ ಸಮುದಾಯದವಾಗಿದ್ದು, ಗುಣಮಟ್ಟದ ಕೆಲಸದಿಂದಾಗಿ ಇಂದು ದೇಶ-ವಿದೇಶಗಳಲ್ಲಿ ಗುರುತಿಸಲ್ಪಟ್ಟಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಜ್ಞಾನಪೀಠ ಪುರಸ್ಕೃತ ಕೊಂಕಣಿ ಕಾದಂಬರಿಕಾರ ದಾಮೋದರ ಮೌರೊ, ಸಾಹಿತಿಗಳು ಹಾಗೂ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅರ್ಹರಿಗೆ ಅರ್ಹವಾಗಿಯೇ ವಿಶ್ವಕೊಂಕಣಿ ಕೇಂದ್ರದ ಪ್ರಶಸ್ತಿಗಳು ಸಂದಿವೆ. ಇಂದು ಕೊಂಕಣಿಯಲ್ಲಿ ಸಾಹಿತ್ಯ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗುತ್ತಿದೆ. ಕೊಂಕಣಿ ಪಂಗಡಗಳನ್ನು ಒಟ್ಟು ಸೇರಿಸುವಲ್ಲಿ ಬಸ್ತಿ ವಾಮನ ಶೆಣೈ ಅವರ ಯಶಸ್ವಿಯಾಗಿದ್ದು, ಅದರ ಫಲವೇ ವಿಶ್ವಕೊಂಕಣಿ ಕೇಂದ್ರದ ಸ್ಥಾಪನೆ. ಗೋವಾದಲ್ಲಿಯೂ ನಮಗೆ ಅವರು ಪ್ರೇರಣೆಯಾಗಿ ಕೆಲಸ ಮಾಡಿದ್ದರು ಎಂದರು.
ಪ್ರಶಸ್ತಿ ಪ್ರದಾನ
೨೦೨೧ನೇ ಸಾಲಿನ ವಿಮಲಾ ವಿ.ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಕೊಂಕಣಿ ಸಾಹಿತಿ ಆಂಟನಿ ಬಾರ್ಕೂರ್, ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕೊಂಕಣಿ ಸಾಹಿತಿ ಉದಯ್ ಮ್ಹಾಂಬ್ರೊ, ಕೊಂಕಣಿ ಭಾಷೆ, ಸಂಸ್ಕೃತಿಗೆ ಜೀವಮಾನದ ಕೊಡುಗೆ ನೀಡಿದ ಮಹನೀಯರಿಗೆ ಕೊಡಮಾಡುವ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ್ ಸಿದ್ಧಿ ಸನ್ಮಾನ’ ಗೋವಾದ ಕೊಂಕಣಿ ವ್ಯಾಕರಣ, ನಿಘಂಟು ತಜ್ಞ ಸುರೇಶ ಬೋರ್ಕರ್ ಅವರಿಗೆ ಪ್ರದಾನ ಮಾಡಲಾಯಿತು. ನಿರ್ಗತಿಕರ ಸೇವೆಗೆ ತನ್ನ ವಿಶೇಷ ಕೊಡುಗೆ ನೀಡಿದ ಕೊರೀನ್ ಎ. ರಸ್ಕಿನ್ಹಾ ಮತ್ತು ಹೃದ್ರೋಗದ ತ್ವರಿತ ಶುಶ್ರೂಷೆಯಲ್ಲಿ ವಿಶೇಷ ಸಾಧನೆ ಮಾಡಿರುವ ಡಾ.ಪದ್ಮನಾಭ ಕಾಮತ್ ಅವರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಎಲ್ಲ ಪ್ರಶಸ್ತಿಗಳು ೧ಲಕ್ಷ ರೂ. ಸನ್ಮಾನಧನ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ.
ಉಪಾಧ್ಯಕ್ಷರಾದ ಗಿಲ್ಬರ್ಟ್ ಡಿಸೋಜ, ಡಾ.ಕಿರಣ್ ಬಡ್ಕುಳೆ, ಕೋಶಾಧಿಕಾರಿ ಡಾ.ಬಿ.ಆರ್.ಭಟ್, ಕಾರ್ಯದರ್ಶಿ ಗಿರಿಧರ ಕಾಮತ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಟ್ರಸ್ಟಿ ಮೆಲ್ವಿನ್ ರಾಡ್ರಿಗಸ್, ಪಯ್ಯನ್ನೂರು ರಮೇಶ್ ಪೈ, ಸಿಇಒ ಗುರುದತ್ ಬಂಟ್ವಾಳ್‌ಕರ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.