ಇಎಂಎಸ್ ನಂಬೂದರಿಪ್ಪಾಡ್‌ರ ಸಂಸ್ಮರಣೆ
ಮಂಗಳೂರು : ಕಮ್ಯುನಿಸ್ಟ್ ಚಳುವಳಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಇಎಂಎಸ್ ನಂಬೂದರಿಪ್ಪಾಡ್‌ರವರ 24ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಇಎಂಎಸ್ ರವರು ತನ್ನ ವಿಶಿಷ್ಠವಾದ ಬೌದ್ಧಿಕ ಮೇಧಾವಿತನದಿಂದಾಗಿ ಮಾರ್ಕ್ಸ್‌ವಾದವನ್ನು ಕೇರಳ ಹಾಗೂ ಇಡೀ ದೇಶಕ್ಕೆ ಅನ್ವಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಮಾರ್ಕ್ಸ್‌ವಾದಿ ನಿಲುವಿನ ಸೈದ್ದಾಂತಿಕ ಸಾರವನ್ನು ಗ್ರಹಿಸಿಕೊಂಡು ಅದನ್ನು ರಾಜಕೀಯ ಆಂದೋಲನಗಳಿಗೆ ಪರಿಹಾರವಾಗಿ ಪರಿವರ್ತಿಸುವ ಇಎಂಎಸ್‌ರವರ ಗುಣ ನಿಜಕ್ಕೂ ಅತ್ಯದ್ಭುತವಾಗಿದೆ. ಇಂತಹ ಪ್ರಖರ ಮಾರ್ಕ್ಸ್ ವಾದಿ ಚಿಂತಕ ಇಎಂಎಸ್ ರವರು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ, ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಜನತೆಯ ಉತ್ತಮ ಬದುಕಿಗಾಗಿ ಅವಿರತವಾಗಿ ಶ್ರಮಿಸಿ, ನವಕೇರಳ ನಿರ್ಮಾಣದ ಹರಿಕಾರರಾಗಿ ಜನತೆಯ ಹೃದಯದಲ್ಲಿ ಅಜರಾಮರವಾಗಿ ನೆಲೆಯೂರಿದ್ದಾರೆ ಎಂದು ಅವರು ಹೇಳಿದರು.
ನಿವೃತ್ತ ಪೋಲಿಸ್ ಅಧಿಕಾರಿ ಟಿಸಿಎಂ ಶರೀಫ್ ಮಾತನಾಡಿ, ಎಳೆಯ ಪ್ರಾಯದಲ್ಲೇ ತನ್ನ ಇಡೀ ಕುಟುಂಬ ಇಎಂಎಸ್ ಎಕೆಜಿಯವರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯವನ್ನು ಹಾಗೂ ಕಮ್ಯುನಿಸ್ಟ್ ಚಳುವಳಿಯ ಬಗ್ಗೆ ಇರಿಸಿದ್ದ ಅಪಾರ ಗೌರವ ಭಾವನೆಯನ್ನು ಹಂಚಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್ ವಹಿಸಿದ್ದರು. ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ, ನವೀನ್ ಕೊಂಚಾಡಿ ವಂದಿಸಿದರು.







