ಕೇಸರಿ ಧ್ವಜವೇ ಮುಂದೆ ರಾಷ್ಟ್ರಧ್ವಜ ಆಗಬಹುದು: ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್

ಉಳ್ಳಾಲ: ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಲಿಸಲು ಮುಂದಾಗಿರುವುದು ಶ್ಲಾಘನೀಯ. ಹಿಂದೂ ಸಮಾಜ ಈ ವಿಚಾರದಲ್ಲಿ ಒಂದು ಆಗಲೇಬೇಕು. ನಾವು ರಾಷ್ಟ್ರಧ್ವಜಕ್ಕೆ ಗೌರವ ನೀಡೋಣ. ಒಂದಲ್ಲ ಒಂದು ದಿನ ರಾಷ್ಟ್ರಧ್ವಜ ಕೇಸರಿ ಬಣ್ಣದ್ದಾಗಲೂಬಹುದು ಎಂದು ಆರೆಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಕೊರಗಜ್ಜ ಅದಿಕ್ಷೇತ್ರ ಕುತ್ತಾರಿಗೆ ರವಿವಾರ ಪಾದಯಾತ್ರೆಯ ಬಳಿಕ ಕುತ್ತಾರ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪು ಒಪ್ಪಿಕೊಳ್ಳಲು ಆಗದಿದ್ದಲ್ಲಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಕೇಳಬಹುದು ಆದರೆ ಹೈಕೋರ್ಟ್ ತೀರ್ಪು ನಿರಾಕರಿಸಿ ನಾವು ಹಿಂದಿನಂತೆ ಹಿಜಾಬ್ ಹಾಕಿಯೇ ಬರುತ್ತೇವೆ ಎಂದು ಹೇಳುವುದು ರಾಷ್ಟ್ರದ್ರೋಹ ಎಂದರು.
ಹಿಜಾಬ್ ಬೇಕು ಎನ್ನುವ ಎಸ್‍ಡಿಪಿಐಗೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಹಿಜಾಬ್ ಹಾಕಿಸುವ ತಾಕತ್ತು ಇದೆಯೇ? ಹಿಜಾಬ್ ಹಾಕಲೇಬೇಕೆಂದು ಮುಸ್ಲಿಮರಿಗೆ ಇದ್ದರೆ ಅವರು ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ. ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳದ ಬ್ಯಾರಿಗಳೊಂದಿಗೆ ಸ್ನೇಹ ಬೆಳೆಸುವ ಮೊದಲು ಆಲೋಚನೆ ಮಾಡಬೇಕಾಗಿದೆ. ಹಿಜಾಬ್ ವಿಚಾರದಲ್ಲಿ ಮುಸಲ್ಮಾನರು ನ್ಯಾಯಾಲಯ, ಸಂವಿಧಾನ ಕಡೆಗಣಿಸಿ ಅಗತ್ಯ ಸೇವೆಯನ್ನು ಬಂದ್ ಮಾಡಿದರು. ಇವರು ಹಿಂದೂಗಳ ಜತೆ ಮಾಡುವುದು ಡೋಂಗಿ ದೋಸ್ತಿ ಎಂದು ಆರೋಪಿಸಿದರು.
ಜಗತ್ತಿನಲ್ಲಿ ಮುಸ್ಲಿಂ, ಕ್ರೈಸ್ತ ಎನ್ನುವ ಧರ್ಮವೇ ಇಲ್ಲ. ಕುರಾನ್, ಬೈಬಲ್ ಶಾಲೆಗೆ ತರುವ ಅವಶ್ಯಕತೆ ಕೂಡ ಇಲ್ಲ. ಇದನ್ನು ಕೇಳುವವರು ಕೂಡಾ ಇಲ್ಲ. ಸರಕಾರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಲಿಸಲು ಮುಂದಾಗಿರುವುದು ಶ್ಲಾಘನೀಯ. ಹಿಂದೂ ಸಮಾಜ ಈ ವಿಚಾರದಲ್ಲಿ ಒಂದು ಆಗಲೇಬೇಕು. ನಾವು ರಾಷ್ಟ್ರಧ್ವಜಕ್ಕೆ ಗೌರವ ನೀಡೋಣ. ಒಂದಲ್ಲ ಒಂದು ದಿನ ರಾಷ್ಟ್ರಧ್ವಜ ಕೇಸರಿ ಬಣ್ಣದ್ದಾಗಲೂಬಹುದು ಎಂದರು.
ಸಿದ್ದರಾಮಯ್ಯ ಟೀಕೆ ಮಾಡುವ ಮೊದಲು ಗೋಧ್ರಾದಲ್ಲಿ ರೈಲಲ್ಲಿ ಸಜೀವ ದಹನಗೊಂಡವರ ಮನೆ ಮಂದಿಯನ್ನು ಭೇಟಿ ಮಾಡಿ ಅವಲೋಕ ಮಾಡಲಿ. ಅವರು ಹಿಜಾಬ್ ಧರಿಸುವಿಕೆಗಿಂತಲೂ ಕೇಸರಿ ಶಾಲು ಧರಿಸಿದ್ದರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಈ ವಿವಾದವನ್ನು ಗೋದ್ರಾ ವಿಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಿಜಾಬ್ ಬಗ್ಗೆ ಮಾತನಾಡಿದರೆ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿ ಅವರಿಗಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೃಷ್ಣ ಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ಜಿಲ್ಲಾ ಸೇವಾ ಪ್ರಮುಖರಾದ ಪ್ರವೀಣ್ ಕುತ್ತಾರು, ಕೊರಗಜ್ಜ ಆದಿ ಕ್ಷೇತ್ರದ ಮೊಕ್ತೇಸರ ರವೀಂದ್ರನಾಥ ಪೂಂಜ, ಸ್ಥಳೀಯ ಗುತ್ತಿನ ಮನೆತನದ ವಿನೋದ್ ಶೆಟ್ಟಿ ಬೊಳ್ಳೆಗುತ್ತು, ರತ್ನಾಕರ ಕಾವ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಶಿವಾನಂದ ಮೆಂಡನ್ ಸ್ವಾಗತಿಸಿದರು. ಚೇತನ್ ಅಸೈಗೋಳಿ ವಂದಿಸಿದರು. ರವಿ ಅಸೈಗೋಳಿ ನಿರೂಪಿಸಿದರು.







