ನೀಟ್ ಕಟ್-ಆಫ್ ವಿವಾದ: ಸರಕಾರದ ನಿರ್ಧಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆ; ಟಿ.ಎ.ನಾರಾಯಣಗೌಡ

ಬೆಂಗಳೂರು, ಮಾ. 20: ವೈದ್ಯಕೀಯ ಸ್ನಾತಕೋತ್ತರ ಸೀಟುಗಳು ಕರ್ನಾಟಕದ ಕಿರಿಯ ವೈದ್ಯರು ಪಡೆಯಲು ಅನುಕೂಲವಾಗುವಂತೆ ಮಾ.12ರಂದು ಕಟ್-ಆಫ್ ಅಂಕಗಳನ್ನು ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ರಾಜ್ಯದ ಸೇವಾನಿರತ ವೈದ್ಯರು ಕೌನ್ಸಿಲಿಂಗ್‍ಗೆ ಅರ್ಹರಾಗಿದ್ದರು. ಆದರೆ ಸರಕಾರದ ಕೊನೆ ಘಳಿಗೆಯಲ್ಲಿ ಕೈಗೊಂಡ ನಿರ್ಧಾರದಿಂದ ರಾಜ್ಯದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಪ್ರಯತ್ನದಿಂದಲೇ ಕಟ್-ಆಫ್ ಕಡಿತವಾಗಿತ್ತು. ಆದರೆ ಕರ್ನಾಟಕ ಸರಕಾರವು ಸೇವಾನಿರತ ವೈದ್ಯರಿಗೆ ಕಾಯ್ದಿರಿಸಿದ್ದ ಸೀಟುಗಳನ್ನು ಕೇಂದ್ರ ಸರಕಾರಕ್ಕೆ ಮಾ.16ರಂದು ವಾಪಸ್ ನೀಡಿದೆ. ಸಚಿವರ ಪ್ರಯತ್ನವನ್ನು ವಿಫಲಗೊಳಿಸಿದ ಕಾಣದ ಶಕ್ತಿಗಳು ಯಾವುವು? ಎಂದು ಪ್ರಶ್ನಿಸಿದ್ದಾರೆ.
ನೀಟ್ ಪಿಜಿ ಕರ್ನಾಟಕದ ಪಾಲಿನ ಶೇ.50 ಸೀಟುಗಳಲ್ಲಿ ಕೌನ್ಸಲಿಂಗ್ ನಂತರದ ಉಳಿದ ಸೀಟುಗಳನ್ನು ಕೇಂದ್ರಕ್ಕೆ ಕೊಡಲು ಹೊರಟಿರುವುದು ಸರಿಯಲ್ಲ. ಸಚಿವರು ಈ ಕೂಡಲೇ ಈ ಪ್ರಕ್ರಿಯೆಯನ್ನು ಕೈಬಿಟ್ಟು ರಾಜ್ಯದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಎಲ್ಲ ಪ್ರಯತ್ನ ಮಾಡಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
ತಮಿಳುನಾಡು ಸರಕಾರದಿಂದ ನಮ್ಮ ನಾಡ ಸರಕಾರ ಕಲಿಯುವುದು ತುಂಬಾ ಇದೆ. ಅಲ್ಲಿನ ಕೌನ್ಸಿಲಿಂಗ್ ನಂತರ ಉಳಿದ ಸೀಟುಗಳನ್ನು ಕಟ್ ಆಫ್ ಕಡಿಮೆ ಮಾಡಿ, ಉಳಿದ ಅಭ್ಯರ್ಥಿಗಳಿಗೆ ಆ ಸೀಟುಗಳನ್ನು ಮರು ಹಂಚಿಕೆ ಮಾಡಿ ತಮ್ಮ ನಾಡಿನ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ನಮ್ಮ ಸೀಟುಗಳನ್ನು ಕೇಂದ್ರಕ್ಕೆ ಹಿಂದಿರುಗಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲೇ ನೀಟ್ ಎಂಬ ಎನ್‍ಸಿಆರ್‍ಟಿ ಸಿಲಬಸ್‍ನಲ್ಲಿ ನಡೆಯುವ ಪರೀಕ್ಷೆಯಾಗಿದ್ದು, ಕಬ್ಬಿಣ ಕಡಲೆಯಾಗಿ ನಮ್ಮ ಮಕ್ಕಳ ಎಂಬಿಬಿಎಸ್ ಎಂಡಿ ಸೀಟುಗಳು ಪರಭಾಷಿಕರ ಪಾಲಾಗುತ್ತಿವೆ. ಈಗ ರಾಜ್ಯದ ಪಟ್ಟಿಯಲ್ಲಿ ಉಳಿದಿರುವ ಸೀಟುಗಳನ್ನ ಮತ್ತೆ ಕೇಂದ್ರಕ್ಕೆ ಕೊಡಲು ಹೊರಟಿರುವುದರಿಂದ ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕರ್ನಾಟಕದ ಕಿರಿಯ ವೈದ್ಯರು ಪ್ರಾಣದ ಹಂಗು ತೊರೆದು ಸರಕಾರಿ ಆಸ್ಪತ್ರೆಗಳಲ್ಲಿ ದುಡಿದಿದ್ದರು. ಈ ಕರೋನಾ ವಾರಿಯರ್‍ಗಳಿಗೆ ಪ್ರಶಂಸೆ ನೀಡದಿದ್ದರೂ ಪರವಾಗಿಲ್ಲ, ಆದರೆ ಸ್ನಾತಕೋತ್ತರ ಪದವಿ ಓದುವ ಹಕ್ಕುಗಳನ್ನು ಕಸಿಯುವುದು ಎಷ್ಟು ಸರಿ? ಇದು ಅನ್ಯಾಯದ ಪರಮಾವಧಿ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರಕಾರವು ಕೂಡಲೇ ಎಚ್ಚೆತ್ತುಕೊಂಡು ಆ ಸೀಟುಗಳನ್ನು ವಾಪಾಸ್ ಪಡೆಯಬೇಕು. ಕರ್ನಾಟಕದ ಅಭ್ಯರ್ಥಿಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಕರ್ನಾಟಕ ಸರಕಾರ ಇರುವುದು ಕನ್ನಡಿಗರ ರಕ್ಷಣೆಗೆ ಎಂದು ಮರೆಯಬಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.







