ಶಿವಮೊಗ್ಗ: ಪ್ರಿಯಕರನ ಮದುವೆ ದಿನವೇ ಡೆತ್ನೋಟ್ ಬರೆದು ಆತ್ಮಹತ್ಯೆಗೈದ ಯುವತಿ

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಬೇರೆಯ ಯುವತಿಯೊಂದಿಗೆ ಪ್ರಿಯಕರ ಮದುವೆ ಆಗುತ್ತಿರುವುದರಿಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಹ್ಯಾದ್ರಿ ಕಾಲೇಜಿನ ಅತಿಥಿ ಉಪನ್ಯಾಸಕಿ ಒಟಿ ರಸ್ತೆಯ ನಿವಾಸಿ ರೂಪಶ್ರೀ ಅವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರೂಪಶ್ರೀ ಅವರು ಮುರುಳಿ ಎನ್ನುವವರಿಗೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮುರುಳಿಯ ಮದುವೆ ನಿಶ್ಚಯವಾಗಿದ್ದು, ಮದುವೆಯ ದಿನವೇ ರೂಪಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಾವಿಗೂ ಮುನ್ನ ರೂಪಶ್ರೀ ಅವರು ನಾಲ್ಕು ಪುಟಗಳ ಡೆತ್ನೋಟ್ ಬರೆದಿದ್ದಾರೆ. ಅದರಲ್ಲಿ `ಇಬ್ಬರೂ ಪ್ರೀತಿ ಮಾಡುತ್ತಿದ್ದೇವು. ಮದುವೆ ಆಗಲು ಕೂಡ ನಿರ್ಧಾರ ಮಾಡಿದ್ದೇವು. ಈಗ ತನ್ನನ್ನು ಬಿಟ್ಟು ಬೇರೊಬ್ಬರೂ ಜೊತೆಗೆ ಮದುವೆ ಆಗುತ್ತಿದ್ದಾನೆ' ಎಂದು ಆರೋಪಿಸಿದ್ದಾರೆ. ಹೀಗಾಗಿ, ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ತಾಳಿ ಕಟ್ಟಿ ಪರಾರಿ: ಕಲ್ಯಾಣ ಮಂಟಪದಲ್ಲಿ ನಿಶ್ಚಯವಾಗಿದ್ದ ಯುವತಿಗೆ ಮುರುಳಿ ತಾಳಿ ಕೂಡ ಕಟ್ಟಿದ್ದಾನೆ. ರೂಪಶ್ರೀ ಆತ್ಮಹತ್ಯೆಯ ವಿಚಾರ ತಿಳಿಯುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ರೂಪಶ್ರೀ ಅವರು ಅತಿಥಿ ಉಪನ್ಯಾಸಕರಾಗಿದ್ದು, ಪಿಎಚ್ಡಿ ಕೂಡ ಮಾಡುತ್ತಿದ್ದರು. ಮುರುಳಿ ಕೂಡ ಉಪನ್ಯಾಸಕನಾಗಿದ್ದು, ಖಾಸಗಿ ಕಾಲೇಜುವೊಂದರಲ್ಲಿ ಕೆಲಸ ಮಾಡುತ್ತಿದ್ದ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೇರೆಯ ಹುಡುಗಿಯ ಜತೆ ವಿವಾಹವಾಗುತ್ತಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೊಡ್ಡಪೇಟೆ ಠಾಣೆಯಲ್ಲಿ ಪರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







