ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ವಿರೋಧ ಇಲ್ಲ: ಯು.ಟಿ ಖಾದರ್

ಬಳ್ಳಾರಿ: ರಾಜ್ಯದಲ್ಲಿ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಚರ್ಚೆ ನಡೆಯುತ್ತಿದ್ದು, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ವಿರೋಧ ಇಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ಶುದ್ಧಿ ಮಾಡುವ ಶಕ್ತಿ ಹೊಂದಿರುವ ಹಾಗೂ ನೈತಿಕ ಮೌಲ್ಯ ತುಂಬುವ ಧಾರ್ಮಿಕ ವಿಚಾರಧಾರೆ ತಿಳಿಸುವುದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಜನರ ಹೃದಯ ಶುದ್ಧಿ ಮಾಡುವ, ಮಕ್ಕಳಲ್ಲಿ ನೈತಿಕತೆ ಬಿತ್ತುವ ಭಗವದ್ಗೀತೆ, ಕುರಾನ್, ಬೈಬಲ್, ಬಸವಣ್ಣನವರ ವಚನ, ನಾರಾಯಣ ಗುರುಗಳ ತತ್ವವನ್ನು ಬಿತ್ತುವ ಶಿಕ್ಷಣ ಕೊಡಿಸಬೇಕಿದೆ. ಹೀಗಾಗಿ ಶಾಲೆಯಲ್ಲಿ ಭಗವದ್ಗೀತೆ ಪ್ರವಚನ ಮಾಡಿಸುವುದರ ಕುರಿತು ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಚಿಂತನೆ ನಡೆಸಿಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ
ಶಾಲಾ-ಕಾಲೇಜುಗಳಲ್ಲಿ ಧರ್ಮಾಧಾರಿತ ಹಿಜಾಬ್‌ಗ ವಿರೋಧ ವ್ಯಕ್ತಪಡಿಸಿದ ಬಿಜೆಪಿಯವರು, ಪಠ್ಯಪುಸ್ತಕಗಳಲ್ಲಿ ಧರ್ಮಾಧಾರಿತ ಭಗವದ್ಗೀತೆಯನ್ನು ಹೇಗೆ ಪಠಿಸುತ್ತಾರೆ. ಒಳ್ಳೆಯದು ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಓಟ್ ಬ್ಯಾಂಕ್‌ಗಾಗಿ ಗೊಂದಲ ಸೃಷ್ಟಿಸಿ, ಸಮಾಜವನ್ನು ಸದಾ ಗೊಂದಲದಲ್ಲಿ ಇಡುವುದು ಸರಿಯಲ್ಲ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಅಗತ್ಯವಿದೆ ಎಂದವರು ತಿಳಿಸಿದರು.







