ಸಾಮಾಜಿಕ ಮಾಧ್ಯಮಗಳು ಮಾದ್ ‘ಯಮ’ಗಳಾಗಿವೆ: ಡುಂಡಿರಾಜ್

ಉಡುಪಿ : ಮೊಬೈಲ್ ಪ್ರಭಾವದಿಂದಾಗಿ ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆ ಆಗಿದೆ. ಸಂವಹನದ ಉದ್ದೇಶದಿಂದ ಬಂದಿರುವ ಮೊಬೈಲ್ ದುರುದ್ದೇಶಗಳಿಗೆ ಬಳಕೆಯಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಮಾದ್ ‘ಯಮ’ಗಳಾಗಿವೆ ಎಂದು ಹಾಸ್ಯ ಸಾಹಿತಿ ಎಚ್.ಡುಂಡಿರಾಜ್ ಹೇಳಿದ್ದಾರೆ.
ಉಡುಪಿಯ ಸುಹಾಸಂ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್ ಟಾಪ್‌ನಲ್ಲಿ ನಡೆದ ಹಾಸ್ಯೋಲ್ಲಾಸ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.
ಪುಸ್ತಕ ಬಿಡುಗಡೆ ಅಂದರೆ ಅದನ್ನು ರಚಿಸಲು ಕಷ್ಟಪಡುವ ಲೇಖಕರ ಬಿಡು ಗಡೆಯಾಗಿದೆ. ಪುಸ್ತಕವನ್ನು ಕೊಂಡು ಓದುವ ಮೂಲಕ ಬಹರಗಾರರನ್ನು ಪ್ರೋತ್ಸಾಹಿಸಬೇಕಾಗಿದೆ. ಬರವಣಿಗೆ ಎಂಬುದು ತಪಸ್ಸು. ಕೆಲವರು ಅದನ್ನು ಸುಲಭ ಅಂದರೆ, ಇನ್ನು ಕೆಲವರು ಕಷ್ಟ ಎನ್ನುತ್ತಾರೆ. ಕೇವಲ ಬರೆದರೆ ಸಾಲದು, ಸಂತೋಷ ಕೂಡ ಇರಬೇಕು. ಆಗ ಮಾತ್ರ ಲೇಖಕರಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್, ನ್ಯಾಯ ವಾದಿ ಎಸ್.ಸಂತೋಷ ಹೆಬ್ಬಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಸಂಗ್ರಹ(ಭಾರತೀಯ ಅಡುಗೆಗಳು), ಉಭಯಕುಶಲೋಪರಿ-೧, ೨, ೩ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿದರು. ಸಾಹಿತಿ ಡಾ. ಎನ್.ವಿ.ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು. ಶ್ರೀನಿವಾಸ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.