"ನನ್ನ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳು ಸಮಾಜದಲ್ಲಿ ಒಡಕು ಸೃಷ್ಟಿಸುತ್ತವೆ": ಗುಲಾಂ ನಬಿ ಆಝಾದ್

ಜಮ್ಮು, ಮಾ. 20: ತನ್ನ ಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಜಾತಿ ಹಾಗೂ ಧರ್ಮದ ನೆಲೆಯಲ್ಲಿ ಸಮಾಜದಲ್ಲಿ ಒಡಕು ಸೃಷ್ಟಿಸುತ್ತವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಝಾದ್ ಅವರು ರವಿವಾರ ಹೇಳಿದ್ದಾರೆ. ಆದರೆ, ಈ ಭಿನ್ನತೆ ಪರಿಗಣಿಸದೆ ಸಮಾಜದ ಎಲ್ಲರೂ ಸಂಘಟಿತರಾಗಿರಬೇಕು. ಜಾತಿ, ಜನಾಂಗ, ಧರ್ಮ ಪರಿಗಣಿಸದೆ ಪ್ರತಿಯೊಬ್ಬರಿಗೂ ನ್ಯಾಯ ನೀಬೇಕು ಎಂದು ಅವರು ಹೇಳಿದ್ದಾರೆ.
‘‘ರಾಜಕೀಯ ಪಕ್ಷಗಳು ಧರ್ಮ, ಜಾತಿ ಹಾಗೂ ಇತರ ವಿಷಯಗಳ ಆಧಾರದಲ್ಲಿ ದಿನದ 24 ಗಂಟೆಗಳ ಕಾಲವೂ ಒಡಕು ಸೃಷ್ಟಿಸುತ್ತವೆ. ನನ್ನ ಪಕ್ಷ (ಕಾಂಗ್ರೆಸ್)ಸೇರಿದಂತೆ ನಾನು ಯಾವುದೇ ಪಕ್ಷವನ್ನು ಕ್ಷಮಿಸಲಾರೆ. ನಾಗರಿಕ ಸಮಾಜ ಸಂಘಟಿತರಾಗಿರಬೇಕು. ಜಾತಿ ಹಾಗೂ ಧರ್ಮ ಪರಿಗಣಿಸದೆ ಪ್ರತಿಯೊಬ್ಬನಿಗೂ ನ್ಯಾಯ ದೊರಕಬೇಕು’’ ಎಂದು ಅವರು ಹೇಳಿದರು.
ಮಹಾತ್ಮಾ ಗಾಂಧಿ ಅತಿ ದೊಡ್ಡ ಹಿಂದೂ ಹಾಗೂ ಜಾತ್ಯಾತೀತವಾದಿ ಎಂದು ಒತ್ತಿ ಹೇಳಿದ ಅವರು, ಜಮ್ಮು ಹಾಗೂ ಕಾಶ್ಮೀರದಲ್ಲಿ ಏನು ನಡೆದಿದೆಯೋ ಅದಕ್ಕೆ ಪಾಕಿಸ್ತಾನ ಹಾಗೂ ಭಯೋತ್ಪಾದಕರು ಕಾರಣ. ಇದು ಹಿಂದೂ, ಕಾಶ್ಮೀರಿ ಪಂಡಿತರು, ಕಾಶ್ಮೀರಿ ಮುಸ್ಲಿಮರು ಹಾಗೂ ಡೋಗ್ರಾಗಳು ಸೇರಿದಂತೆ ಜಮ್ಮು ಕಾಶ್ಮೀರದ ಎಲ್ಲರ ಮೇಲೆ ಪರಿಣಾಮ ಉಂಟು ಮಾಡಿದೆ ಎಂದಿದ್ದಾರೆ. 1990ರಲ್ಲಿ ಕಣಿವೆಯಿಂದ ನಿರ್ಗಮಿಸಿರುವ ಕಾಶ್ಮೀರಿ ಪಂಡಿತರ ಕುರಿತ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರದ ಕುರಿತ ವಿವಾದದ ನಡುವೆ ಅವರು ಈ ಹೇಳಿಕೆ ನೀಡಿದ್ದಾರೆ.







