ಶಿಕ್ಷಣದಲ್ಲಿ ಕೇಸರೀಕರಣ ತಪ್ಪೇನು?
ಮಾನ್ಯರೇ,
'ಶಿಕ್ಷಣದಲ್ಲಿ ಕೇಸರೀಕರಣ ಮಾಡಿದರೆ ತಪ್ಪೇನು?' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೇಳಿದ್ದಾರೆ. 'ಸರ್ವೇಜನ ಸುಖಿನೋ ಭವಂತು' 'ವಸುದೈವ ಕುಟುಂಬಕಂ' ಎನ್ನುವ ತತ್ವಜ್ಞಾನ ಇಂದಿನ ಅಗತ್ಯ ಎಂದೂ ಪ್ರತಿಪಾದಿಸಿದ್ದಾರೆ. ಶಿಕ್ಷಣದ ಕೇಸರೀಕರಣವೆಂದರೆ, ಶಿಕ್ಷಣವನ್ನು ಪರೋಕ್ಷವಾಗಿ ಹಿಂದಿನ ಗುರುಕುಲದ ಕಡೆಗೆ ಕೊಂಡೊಯ್ಯುವುದು. ಮುಖ್ಯವಾಗಿ ಶಿಕ್ಷಣದ ಕೇಸರೀಕರಣವೆಂದರೆ, ಶಿಕ್ಷಣವನ್ನು ವೈದಿಕೀಕರಣಗೊಳಿಸುವುದು.
ಭಾರತದ ಪ್ರಾಚೀನ ಕಾಲದಲ್ಲಿ ವಸುದೈವ ಕುಟುಂಬಕಂ ತತ್ವ ಅಳವಡಿಕೆಯಾಗಿದ್ದಿದ್ದರೆ ಶೂದ್ರರು ಮತ್ತು ದಲಿತರಿಗೆ ಶಿಕ್ಷಣ ಯಾಕೆ ನಿರಾಕರಿಸಲ್ಪಟ್ಟಿತು ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕಾಗಿದೆ. ಬ್ರಿಟಿಷರು ಭಾರತಕ್ಕೆ ಆಗಮಿಸುವವರೆಗೂ ಭಾರತದ ಕೆಳಜಾತಿಗಳು ಶಿಕ್ಷಣ ಕಲಿಯಲು ಅನರ್ಹವಾಗಿದ್ದವು. ಬ್ರಿಟಿಷರ ಶಿಕ್ಷಣನೀತಿಯಿಂದಾಗಿ ತಳಸ್ತರದ ಜನರೂ ಶಿಕ್ಷಣವನ್ನು ಕಲಿಯುವಂತಹ ಸ್ಥಿತಿ ನಿರ್ಮಾಣವಾಯಿತು. ಶಿಕ್ಷಣದ ಕೇಸರೀಕರಣವೆಂದರೆ, ಮತ್ತೆ ದಲಿತರು, ಶೂದ್ರರನ್ನು ಜೊತೆಗೆ ಬಡವರನ್ನು ಶಿಕ್ಷಣದಿಂದ ಹೊರಗಿಡುವುದು. ಈಗಾಗಲೇ ಬೇರೆ ಬೇರೆ ಮಾರ್ಗದಲ್ಲಿ ಇವರನ್ನು ಹೊರಗಿಡುವ ಕೆಲಸದಲ್ಲಿ ಕೆಲವು ಶಕ್ತಿಗಳು ಯಶಸ್ವಿಯಾಗಿವೆ. ಕೇಸರೀಕರಣ ಸಮಾನ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತದೆ. ಶೂದ್ರರು ಮತ್ತು ದಲಿತರು ವಿದ್ಯೆ ಕಲಿತರೆ ಅವರ ಕಿವಿಗೆ ಕಾದ ಸೀಸವನ್ನು ಸುರಿಯಬೇಕು ಎಂದು ಮನುಸ್ಮತಿ ಹೇಳುತ್ತದೆ. ಇಂತಹ ವ್ಯವಸ್ಥೆಯನ್ನು ಕೇಸರೀಕರಣದ ಹೆಸರಿನಲ್ಲಿ ಮತ್ತೆ ಸ್ಥಾಪಿಸಲು ಹೊರಟವರನ್ನು ನಾವು ಕಟುವಾಗಿ ಖಂಡಿಸಬೇಕಾಗಿದೆ.





