ಮರಿಯೊಪೋಲ್ ರಷ್ಯಾಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ: ಉಕ್ರೇನ್

ಕೀವ್ : ಉಕ್ರೇನ್‍ನ ಪ್ರಮುಖ ಬಂದರು ಪಟ್ಟಣವಾದ ಮರಿಯೋಪೋಲನ್ನು ರಷ್ಯಾದ ಆಗ್ರಹದಂತೆ ಅವರಿಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಉಪ ಪ್ರಧಾನಿ ಇರಿನಾ ವೆರೆಶೋಕ್ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಮೂರು ವಾರಗಳಿಂದ ನಡೆಯುತ್ತಿರುವ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಈ ಬಂದರು ನಗರಕ್ಕೆ ಸರ್ಪಗಾವಲು ಹಾಕಿರುವ ಉಕ್ರೇನ್ ಪಡೆಗಳು ಶಸ್ತ್ರಾಸ್ತ್ರ ತ್ಯಜಿಸಿ ಮಾನವೀಯ ಕಾರಿಡಾರ್ ಮೂಲಕ ನಿರ್ಗಮಿಸಬಹುದು ಎಂಬ ಪ್ರಸ್ತಾವವನ್ನು ರಷ್ಯಾ ಮುಂದಿಟ್ಟಿತ್ತು. "ಶರಣಾಗತಿ ಮತ್ತು ಶಸ್ತ್ರಾಸ್ತ್ರ ತ್ಯಜಿಸುವ ಸಂಬಂಧ ಯಾವ ಮಾತುಕತೆಗೂ ಸಿದ್ಧವಿಲ್ಲ" ಎಂದು ವೆರೆಶೋಕ್ ಹೇಳಿದ್ದಾರೆ.
ಎಂಟು ಪುಟಗಳ ಪತ್ರ ಬರೆಯಲು ಸಮಯ ವ್ಯರ್ಥಪಡಿಸುವ ಬದಲು ಮಾಸ್ಕೊ, ಕಾರಿಡಾರ್ ತೆರೆಯಲಿ ಎಂದು ಅವರು ಹೇಳಿದ್ದಾರೆ. ರಷ್ಯಾದ ರಾಷ್ಟ್ರೀಯ ರಕ್ಷಣಾ ವ್ಯವಹಾರಗಳ ಕೇಂದ್ರದ ಮುಖ್ಯಸ್ಥ ಕರ್ನಲ್ ಜನರಲ್ ಮಿಖೈಲ್ ಮಿನಿಸ್ಟೋವ್ ಅವರು ಉಕ್ರೇನ್‍ಗೆ ಪತ್ರ ಬರೆದು ಈ ಆಗ್ರಹ ಮುಂದಿಟ್ಟಿದ್ದರು.
"ಮರಿಯೊಪೋಲ್‍ನಲ್ಲಿ ಭಯಾನಕ ಮಾನವೀಯ ವಿನಾಶಕಾರಿ ಪರಿಸ್ಥಿತಿ ಇದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿದವರಿಗೆ ಸುರಕ್ಷಿತ ವಾಪಸ್ಸಾತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಮಿನಿಸ್ಟೋವ್ ಹೇಳಿದ್ದರು. ನಾಗರಿಕರಿಗೆ ನಿರ್ಮಿಸಿರುವ ಮಾನವೀಯ ಕಾರಿಡಾರನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ತೆರೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸ್ಪಂದಿಸಲು ಉಕ್ರೇನ್‍ಗೆ ಮುಂಜಾನೆ 5 ಗಂಟೆಯವರೆಗೆ ಗಡುವು ನೀಡಲಾಗಿತ್ತು.
ಫೆ.24ರಿಂದ ಪೂರ್ವ ಯೂರೋಪಿಯನ್ ದೇಶದ ಮೇಲೆ ರಷ್ಯಾ ನಡೆಸಿರುವ ದಾಳಿಯ ವೇಳೆ ಮರಿಯೋಪೋಲ್ ಮೇಲೆ ಬಾಂಬ್ ದಾಳಿ ನಡೆದಿದೆ. ನಾಲ್ಕು ಲಕ್ಷ ಮಂದಿ ಇಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಆಹಾರ, ನೀರು ಮತ್ತು ವಿದ್ಯುತ್ ಅಭಾವ ಎದುರಿಸುತ್ತಿರುವ ಬಗ್ಗೆ ವರದಿಯಾಗಿದೆ.







