ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಗೊಂದಲ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಯಲಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 30, 40 ಲಕ್ಷದಿಂದ ಅರ್ಧ ಕೋಟಿಯವರೆಗೂ ಡೀಲ್ ಅನ್ನುವಂತಹ ಸುದ್ದಿಗಳು ಬಹುತೇಕ ಎಲ್ಲ ದಿನಪತ್ರಿಕೆಗಳಲ್ಲಿಯೂ ಪ್ರಕಟಗೊಂಡವು. ಈ ಸುದ್ದಿಗಳು, ನನ್ನಂತೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿಯೇ ವರ್ಷಾನುಗಟ್ಟಲೆ ತಯಾರಿಯಲ್ಲಿದ್ದವರಿಗೆ ಎದೆಬಡಿತ ಹೆಚ್ಚಿಸುತ್ತಿದ್ದವು. ಅಕ್ರಮವಾಗಿ ಆಯ್ಕೆ ಮಾಡಿಕೊಳ್ಳುವ ಮತ್ತು ಅಕ್ರಮವೆಂದು ಸಾಬೀತಾದರೂ ಅವರನ್ನು ಕಾಯುವ ಭ್ರಷ್ಟ ವ್ಯವಸ್ಥೆ ಬಗ್ಗೆ ಅಸಹ್ಯವೆನಿಸುತ್ತಿತ್ತು.ಇದರ ನಡುವೆ National Crime Records Bureau (NCRB)ತನ್ನ ವರದಿಯನ್ನು ಪ್ರಕಟಿಸಿತು.
ನಮ್ಮ ದೇಶದಲ್ಲಿ 2016ರಿಂದ 2019ವರೆಗಿನ ವರ್ಷಗಳಲ್ಲಿ ನಿರುದ್ಯೋಗದಿಂದ ಆಗುತ್ತಿರುವ ಆತ್ಮಹತ್ಯೆಗಳ ಪ್ರಮಾಣ ಶೇ.24ರಷ್ಟು ಹೆಚ್ಚಾಗಿದೆ. ಕರ್ನಾಟಕವು 2016ರಲ್ಲಿ 224, 2017ರಲ್ಲಿ 375, 2018ರಲ್ಲಿ 464 ಮತ್ತು 2019ರಲ್ಲಿ 553, ನಿರುದ್ಯೋಗಿಗಳ ಸಾವನ್ನು ಕಂಡಿದೆ! ಹೀಗೆ ಕರ್ನಾಟಕ ಭಾರತದಲ್ಲಿಯೇ ‘ನಂಬರ್ ಒನ್’ ಸ್ಥಾನದಲ್ಲಿದೆ! ಈ ವರದಿಯ ಕುರಿತಾಗಿ ಪ್ರಶ್ನೆ ಕೇಳಿದರೂ ಆಶ್ಚರ್ಯವಿಲ್ಲವೆಂದು ಬರೆದಿಟ್ಟುಕೊಂಡಿದ್ದೆ!2015ರ ನಂತರದಲ್ಲಿ ಪದವಿ ಪಡೆದುಕೊಂಡ ನಿರುದ್ಯೋಗಿಗಳ ಸಂಖ್ಯೆಯೂ ದ್ವಿಗುಣಗೊಂಡಿತ್ತು. ಈ ಬಾರಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರೆದ ಹುದ್ದೆಗಳ ಸಂಖ್ಯೆಗಳು ತೀರಾ ಕಡಿಮೆ ಇದ್ದವು.ಕೆಲವರಿಗೆ ವಯಸ್ಸು ಮೀರಿತು! ಬಹುತೇಕರಿಗೆ ಇದೇ ಕಡೆಯ ಅವಕಾಶ! ಪೈಪೋಟಿ ತೀವ್ರವಾಗಿತ್ತು! ಓದಿದವರಿಗೆ ನಿರುದ್ಯೋಗವೇ ಭಾಗ್ಯ ಎಂಬಂತಾಗಿದೆ.
ಅನೇಕ ಕಟ್ಟುನಿಟ್ಟುಗಳ ನಡುವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 12 ಮಾರ್ಚ್ 2022ರಿಂದ 16 ಮಾರ್ಚ್ 2022ವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿ ಕೈತೊಳೆದುಕೊಂಡಿತು. ಕನಿಷ್ಠ ಹುದ್ದೆಗಳಿಗೆ ನಡೆಸಿದ ಈ ಪರೀಕ್ಷೆ ಆಕಾಂಕ್ಷಿಗಳ ಮೂಗಿಗೆ ತುಪ್ಪಸವರಿದಂತಿತ್ತು.
ಕನ್ನಡ ವಿಷಯಕ್ಕೆ ಪರೀಕ್ಷಾ ಪ್ರಾಧಿಕಾರವು 15 ಪುಟಗಳ ಪಠ್ಯಕ್ರಮವನ್ನು ನಿಗದಿಪಡಿಸಿತ್ತು. ಅದರಂತೆ ಪ್ರಶ್ನೆಪತ್ರಿಕೆಗಳ ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ. ಹಾಗೆಯೇ ಅಕ್ಷರದೋಷಗಳನ್ನು ಉಳಿಸಿದ, ಪ್ರಾಧಿಕಾರಕ್ಕೆ ಅಥವಾ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಹಿರಿಯ ಪ್ರಾಧ್ಯಾಪಕರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕು!ನನಗೆ ಸಿಕ್ಕ A4 ಸರಣಿಯಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆ 2ರಲ್ಲಿ ಎಚ್.ಎಲ್. ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿಯ ಹೆಸರನ್ನು ‘ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ. ಪ್ರಶ್ನೆಸಂಖ್ಯೆ 9ರಲ್ಲಿ ಷ. ಶೆಟ್ಟರ್ ಅವರ"Memorial stones : a study of their origin, significance, and variety" ಎಂಬ ಸಂಪಾದಿತ ಕೃತಿಯ ಹೆಸರನ್ನು‘Memorial stones in South India’ ಎಂದು ಬದಲಾಯಿಸಿ, ಇದನ್ನೇ ಸರಿಯಾದ ಆಯ್ಕೆಯನ್ನಾಗಿ ಗುರುತಿಸಲು ಹೇಳಲಾಗಿದೆ! ‘South Indian Memorial stones’ ಕೆ. ರಾಜನ್ ಅವರ ಕೃತಿ. ಇದನ್ನೆ ಉಲ್ಟಾಪಲ್ಟಾ ಮಾಡಿದಂತಿದೆ.
ಪ್ರಶ್ನೆಸಂಖ್ಯೆ 18ರ ಆಯ್ಕೆಗಳಲ್ಲಿ ಕೊಟ್ಟಿರುವ ಕೃತಿಯ ಹೆಸರಾದ ‘ವಿಮರ್ಶೆಯ ನರಿಭಾಷೆ’ಯ ಕರ್ತೃ ಯಾರೆಂಬುದನ್ನು ಕಲಿಸದ ಕನ್ನಡ ಸಾಹಿತ್ಯ ಮೇಷ್ಟ್ರುಗಳು ನನ್ನಂತಹ ವಿದ್ಯಾರ್ಥಿಗಳಿಗೆ ಮೋಸಮಾಡಿದ್ದಾರೆ! ‘ನರಿಭಾಷೆ’ಯ ಶೀರ್ಷಿಕೆಯುಳ್ಳ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಪ್ರಾಧಿಕಾರಕ್ಕೆ ಧನ್ಯವಾದಗಳು. ಪ್ರಾಧಿಕಾರವು ಈ ‘ನರಿಭಾಷೆ’ ಕೃತಿಯನ್ನು ಆದಷ್ಟು ಬೇಗ ಪ್ರಕಟಿಸಬೇಕು. ಇಂತಹ ಕೃತಿಯನ್ನು ಪ್ರಶ್ನೆಯಾಗಿಸಿದ ಗುಳ್ಳೆನರಿಗಳ ಗೂಳಿನೊಳಗೆ ನಮ್ಮಂತಹವರ ಆರ್ತನಾದ ಪ್ರಾಧಿಕಾರಕ್ಕೆ ಕೇಳುವುದೇ? ಪ್ರಶ್ನೆಸಂಖ್ಯೆ 19ರಲ್ಲಿ ಕೆ.ವಿ. ತಿರುಮಲೇಶರ ವಿಮರ್ಶಾ ಕೃತಿ ‘ಸಮ್ಮುಖ’ವನ್ನು ‘ಸರ್ಮುಖ’ಗೊಳಿಸಿ, ಲೇಖಕರ ಮುಖಕ್ಕೆ ಹೊಡೆಯಲಾಗಿದೆ.
ಪ್ರಶ್ನೆಸಂಖ್ಯೆ 45ರಲ್ಲಿ ವಚನಕಾರ ಅಲ್ಲಮ ಪ್ರಭು ಅವರ ‘‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ’’ ಎಂಬ ವಚನವನ್ನು ‘‘ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ’’ ಎಂದು ಕೊಡಲಾಗಿದೆ.ಬಿ.ವಿ. ಮಲ್ಲಾಪುರರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಅಲ್ಲಮಪ್ರಭುದೇವರ ವಚನ ಸಂಪುಟ-2ರಲ್ಲಿ ಮತ್ತು ಇದೇ ಪ್ರಾಧಿಕಾರವು ಎಂ.ಎಂ. ಕಲಬುರ್ಗಿಯವರು ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ‘ಗಂಡನವ್ವಾ’ ಎಂದೇ ಇದೆ. ಪ್ರಶ್ನೆಗಾಗಿ ವಚನದ ಸಾಲನ್ನು ತೆಗೆದ ಮಹಾಶಯರು ಯಾವ ಪುಸ್ತಕವನ್ನು ಆಕರವಾಗಿ ಇಟ್ಟುಕೊಂಡಿದ್ದರೊ ತಿಳಿಯದು.
ಪ್ರಶ್ನೆಸಂಖ್ಯೆ 52ರ ಹೊಂದಾಣಿಕೆಯಲ್ಲಿ ನೀಡಲಾದ ವಚನಕಾರ್ತಿಯರು ಮತ್ತವರ ವಚನಗಳಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಅಕ್ಕಮಹಾದೇವಿಯ ಹೆಸರಿನೊಂದಿಗೆ ಬೇರೆಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ. ಇದಕ್ಕೆ ಪ್ರಾಧಿಕಾರ ಯಾವ ಉತ್ತರ ಕೊಡುತ್ತದೆಯೋ ಕಾಯಬೇಕು. ಆದರೆ ತಪ್ಪಾಗಿ ಕೊಟ್ಟಿರುವುದರ ಬಗ್ಗೆ ಆಕ್ಷೇಪಣೆ ಎತ್ತಲೇ ಬೇಕು. ಏಕೆಂದರೆ ಈ ತರಹದ ಸಣ್ಣಪುಟ್ಟ ಗೊಂದಲಗಳು ಅಭ್ಯರ್ಥಿ ಪ್ರಶ್ನೆಯನ್ನು ಅಟೆಂಡ್ ಮಾಡದಂತೆ ತಡೆಯುತ್ತವೆ. ಮಾಡಿದರೆ ಅಂಕಗಳನ್ನು ಕಳೆದುಕೊಳ್ಳುವ ಆತಂಕ ಬೇರೆ!ಪ್ರಶ್ನೆ ಸಂಖ್ಯೆ 53ರಲ್ಲಿ ‘ಚಾಮುಂಡರಾಯ ಪುರಾಣ’ಎಂದು ಬರೆಯಲಾಗಿದೆ. ಈ ಕೃತಿಯನ್ನು ನಮಗೆ ‘ಚಾವುಂಡರಾಯ ಪುರಾಣ’ವೆಂದು ಓದಿಸಿದ್ದು ಮತ್ತು ನಾವು ಓದಿದ್ದು. ಹೀಗೆಲ್ಲಾ ನಮಗೆ ಅಕ್ಷರದೋಷಗಳ ಮೂಲಕ ‘ಮುಂಡಾ’ಯಿಸಲಾಗಿದೆ.
ಪ್ರಶ್ನೆಸಂಖ್ಯೆ 57 ‘ನೆಪೋಲಿಯನ್ ಮತ್ತು ನಾಯಿ’ ಇದು ಇವರ ಕವನ ಎಂದು ಕೇಳಲಾಗಿದೆ. ಇದಕ್ಕೆ ಉತ್ತರದ ಆಯ್ಕೆ ಕುವೆಂಪು. ಈ ಕವಿತೆಯ ಶೀರ್ಷಿಕೆ ಪ್ರಶ್ನೆಪತ್ರಿಕೆಯಲ್ಲಿರುವಂತೆ ಇಲ್ಲ. ‘ಕೋಗಿಲೆ ಮತ್ತು ಸೋವಿಯಟ್ ರಶ್ಯ’ ಕವನ ಸಂಕಲನದಲ್ಲಿ‘ವೀರನ ಕನಿಕರ (ನಾಯಿ-ನೆಪೋಲಿನ್)’ ಎಂದಿದೆ. ಪ್ರಶ್ನೆ ಮಾಡಿದವರು ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ. ಇಂತಹ ‘ಮತ್ತು’ಗಳನ್ನು ಪ್ರಶ್ನೆಯಲ್ಲಿ ಸೇರಿಸಿ, ಓದಿದವರನ್ನು ವಂಚಿಸುವ ಹುನ್ನಾರ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದವರಿಗೆ ಇದ್ದಂತಿದೆ.
ಪ್ರಶ್ನೆಸಂಖ್ಯೆ 63ರ ಹೊಂದಿಸಿ ಬರೆಯಿರಿ ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಕವಿಯೊಬ್ಬರನ್ನು ಪರಿಚಯಿಸಿದ್ದಾರೆ. ಆ ಕವಿಯ ಹೆಸರೇ ‘ಕೆ.ಎಸ್. ನರಸಿಂಹವರ್ಮ’! ಇಲ್ಲಿಯವರೆಗೂ ಇಂತಹ ಪ್ರಸಿದ್ಧ ಕವಿಯೊಬ್ಬರ ಹೆಸರನ್ನು ಅಲಕ್ಷಿಸಿದ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳ ಪಠ್ಯಪುಸ್ತಕ ಕಮಿಟಿಗಳಿಗೆ, ವಿಮರ್ಶಕರಿಗೆ ನನ್ನ ಧಿಕ್ಕಾರಗಳು.ಇತಿಹಾಸದಲ್ಲಿ ‘ಶರ್ಮ’ ‘ವರ್ಮ’ ಆಗಿದ್ದನ್ನು ಓದಿದ್ದೆ. ‘ಸ್ವಾಮಿ’ ‘ವರ್ಮ’ ಆಗಿ ಬದಲಾಗಿದ್ದನ್ನು ಕಂಡು ದಿಗಿಲುಗೊಂಡೆ! ಇದೇ ಪ್ರಶ್ನೆಯಲ್ಲಿ ಕೆ.ಎಸ್. ನಿಸಾರ್ ಅಹಮದ್ ಅವರ ಹೆಸರನ್ನು ‘ಕೆ.ಸ್.’ಎಂದುಬರೆಯಲಾಗಿದೆ. ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಬರೆದುಕೊಡದೇ ಇರುವವರಿಗೆ ಮೊದಲು ಪರೀಕ್ಷೆ ನಡೆಸಬೇಕಿದೆ.
ಪ್ರಶ್ನೆಸಂಖ್ಯೆ 74ರಸರಿಯಾದ ಹೊಂದಾಣಿಕೆಯನ್ನು ಗುರುತಿಸಲು ಸೂಚಿಸಿದ್ದಾರೆ. ದುರಂತ ಅಂದರೆ ಸರಿ ಉತ್ತರದ ಆಯ್ಕೆಯಲ್ಲಿನ ಲೇಖಕರ ಹೆಸರೇ ತಪ್ಪಾಗಿದೆ. ನಮಗೆ ಲೇಖಕ ರಾಘವೇಂದ್ರ ಖಾಸನೀಸ ಗೊತ್ತಿತ್ತು. ‘ನಾಘವೇಂದ್ರ ಖಾಸನೀಸ’ ಗೊತ್ತಿರಲಿಲ್ಲ. ಈ ಹೆಸರಿಗೆ ಪ್ರಾಧಿಕಾರ ಸರಿಯಾದ ಉತ್ತರವನ್ನು ಕೊಡುತ್ತದೆ. ನನಗೆ ತಿಳಿದ ಕೆಲವು ಕನ್ನಡ ಪ್ರಾಧ್ಯಾಪಕರಲ್ಲಿ ವಿಚಾರಿಸಿದೆ. ಅವರು‘‘ಅದೇ ಸರಿಯಾದ ಉತ್ತರ. ಬೇರೆ ಯಾರೂ ನಾಘವೇಂದ್ರ ಖಾಸನೀಸ ಹೆಸರಿನ ಲೇಖಕರಿಲ್ಲ. ಆದ್ದರಿಂದ ಇದನ್ನು ಕಾಗುಣಿತಾಕ್ಷರವೆಂದೇ ಭಾವಿಸಿತಕ್ಕದ್ದು. ಆಕ್ಷೇಪಣೆ ಸಲ್ಲಿಸಿದರೂ ಉತ್ತರ ಬದಲಾಯಿಸುವ ಸಾಧ್ಯತೆ ಇಲ್ಲ’’ಎಂದರು. ಇದಕ್ಕೆ ನಾನು ಪ್ರತಿಕ್ರಿಯಿಸಲೇ ಇಲ್ಲ. ಮನಸ್ಸಿನಲ್ಲಿ‘‘ಅದೇ ವಿದ್ಯಾರ್ಥಿಗಳು ಬರೆದಿದ್ದರೆ ಕಾಗುಣಿತ ದೋಷವೆಂದು ಭಾವಿಸಿ ಅಂಕ ಕೊಡುತ್ತಿದ್ದರೆ? ಎಂದು ಪ್ರಶ್ನಿಸಿಕೊಂಡೆ.
ಪ್ರಶ್ನೆಸಂಖ್ಯೆ 121ರಲ್ಲಿ ಜೀ.ಶಂ.ಪರಮಶಿವಯ್ಯನವರ ಹೆಸರನ್ನು ‘ಜೀ.ಕಂ.ಪರಮಶಿವಯ್ಯ’ ಎಂದು ಬರೆದಿದ್ದಾರೆ. ಈ ಜೀ.ಕಂ. ಪರಮಶಿವಯ್ಯನವರು ಬೇರೆ ಇರಬಹುದೇನೊ? ಕೊಟ್ಟ ಪಠ್ಯಕ್ರಮದಲ್ಲಿಯೂ ಇವರ ಹೆಸರಿರಲಿಲ್ಲ.
ಅನ್ನ ಬೆಂದಿದೆಯೊ ಇಲ್ಲವೊ ಎಂದು ನೋಡಲು ಇಡೀ ಪಾತ್ರೆಯಲ್ಲಿರುವ ಅಗುಳುಗಳನ್ನು ಹಿಚುಕಬೇಕಿಲ್ಲ ಅಲ್ಲವೆ? ಅದೇ ರೀತಿ ಕೆಲವು ಬಹುಮುಖ್ಯ ತಪ್ಪುಗಳನ್ನು ಇಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ. ಇವುಗಳೇ ಪತ್ರಿಕೆಯ ಹಲವು ಅಕ್ಷರ ದೋಷಗಳನ್ನು ಎತ್ತಿ ತೋರಿಸುತ್ತವೆ.ಈ ಮಹತ್ವದ ಪ್ರಶ್ನೆಗಳನ್ನು ಎತ್ತಿದ ‘‘ಶಂಖ ಚಕ್ರ ಚಾಮರ ಹಳಚಿಹ್ನ ಚಿಹ್ನಿತ ಪದಾಕೃತಿ’’ಯುಳ್ಳ ರಾಜರ ಪಾದಗಳನ್ನು ಜೆರಾಕ್ಸ್ ಮಾಡಿಸಿಕೊಟ್ಟರೆ ದೊಡ್ಡ ನಮಸ್ಕಾರಗಳನ್ನು ಹಾಕುವೆ.ಪ್ರಾಧಿಕಾರವು ಇನ್ನುಮುಂದಾದರೂ ಈ ಬಗ್ಗೆ ಗಂಭೀರವಾಗಿ ಗಮನ ವಹಿಸಬೇಕು. ಹಾಗೆಯೇಸಾಹಿತ್ಯ ಕ್ಷೇತ್ರದಲ್ಲಿಸಾಕಷ್ಟು ಹೆಸರು ಮಾಡಿರುವವರು, ಹಲವಾರು ಪ್ರಶಸ್ತಿಗಳನ್ನು ಗಳಿಸಿರುವವರು, ವಿದ್ವಾಂಸರು, ಮಹಾಪ್ರಬಂಧದಲ್ಲಿ ಸಿಗುವ ಅಕ್ಷರ ದೋಷಗಳಿಗಾಗಿ ಸಂಶೋಧಕರನ್ನು ಅಪರಾಧಿಗಳನ್ನಾಗಿಸುವಮಾರ್ಗದರ್ಶಕ ವಿದ್ವಾಂಸರು ಸಹ ಇಂತಹ ಕನ್ನಡ ಬಳಕೆಯ ಬಗ್ಗೆ ತುಟಿ ಬಿಚ್ಚಬೇಕಾಗಿದೆ. ಇಲ್ಲವೆಂದರೆ ಸ್ಪರ್ಧಾತ್ಮಕ ಪರೀಕ್ಷೆಯಕನ್ನಡವೊಂದು ಕಸದಂತೆ ಹುಟ್ಟಿ, ತಪ್ಪನ್ನೇ ಓದಿ, ತಪ್ಪಾಗಿ ಬರೆಯುವ ಅಸಹಾಯಕ ಪ್ರಾಧ್ಯಾಪಕರನ್ನು ಹುಟ್ಟುಹಾಕಿದಮೇಲೆ ಕಸವನ್ನು ಕೀಳಬೇಕಾ, ಹಾಗೆಯೇ ಉಳಿಸಿಕೊಳ್ಳಬೇಕಾ ಎಂಬ ಚರ್ಚೆ ಮಾಡಿದರೆ ಫಲವೇನು ಅಲ್ಲವೇ?







