ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಕುರಿತು ತಜ್ಞರ ಸಮಿತಿ ರಚನೆ: ಸಚಿವ ಬಿ.ಸಿ. ನಾಗೇಶ್

ಬೆಂಗಳೂರು, ಮಾ.21: ಶಾಲಾ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ನೈತಿಕ ಶಿಕ್ಷಣ ಕುರಿತು ಚರ್ಚೆಯಾಗಿದೆ. ಈ ಮೊದಲು ನೈತಿಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇತ್ತೀಚೆಗೆ ಅದು ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವ ಕುರಿತು ಸರಕಾರ ಸಮಿತಿ ರಚಿಸಲಿದೆ. ವರದಿ ಬಂದ ನಂತರ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುಷ್ಠಾನಕ್ಕೆ ತರುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Next Story





