ವಾಮಂಜೂರು: ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ
ವಿದ್ಯಾರ್ಥಿಗಳ ಜೊತೆ ಪೊಲೀಸರ ವರ್ತನೆ ಬಗ್ಗೆ ಆಕ್ರೋಶ
ಮಂಗಳೂರು : ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ನಗರ ಹೊರವಲಯದ ವಾಮಂಜೂರಿನ ಸೈಂಟ್ ರೇಮಂಡ್ಸ್ ಪಿಯು ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಪ್ರಾಂಶುಪಾಲರು, ಉಪನ್ಯಾಸಕರ ಈ ಕ್ರಮವನ್ನು ಖಂಡಿಸಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪ ಮತ್ತು ಆಕ್ರೋಶ ವ್ಯಕ್ತವಾಗಿದೆ.
ನಾವು ಕಳೆದ ವಾರ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದಿದ್ದೆವು. ಈವತ್ತು ಕೂಡ ಎಂದಿನಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದೆವು. ಅಷ್ಟರಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ನಮಗೆ ಪರೀಕ್ಷೆ ಬರೆಯಲು ಬಿಡಲಿಲ್ಲ. ಅಲ್ಲದೆ ಕಾಲೇಜಿನ ಆವರಣದಿಂದ ಹೊರಗೆ ಹೋಗಲು ಸೂಚಿಸಿದರು. ಇದನ್ನು ಖಂಡಿಸಿ ನಾವು ಪ್ರತಿಭಟಿಸಬೇಕಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ನಾವು ಪ್ರತಿಭಟನೆ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಪೊಲೀಸರ ವರ್ತನೆಯು ಅನುಚಿತವಾಗಿತ್ತು. ಕನಿಷ್ಠ ಸೌಜನ್ಯ ದಿಂದ ವರ್ತಿಸದೆ ಕಾಲೇಜಿನ ವಿದ್ಯಾರ್ಥಿಗಳಾದರೂ ನಾವು ಯಾರೋ, ಎಲ್ಲಿಂದಲೋ ಬಂದವರು ಎಂಬಂತೆ ನಮ್ಮೊಡನೆ ವರ್ತಿಸಿದರು. ಯಾರೂ ಇಲ್ಲಿ ನಿಲ್ಲಬೇಡಿ, ಪ್ರತಿಭಟಿಸಬೇಡಿ. ಬೇಗ ಮನೆಗೆ ಹೋಗಿ ಎಂಬಂತೆ ಎಚ್ಚರಿಸಿ ನಮ್ಮಲ್ಲಿ ಭಯಹುಟ್ಟಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿಯವರು ಅವಕಾಶ ನೀಡದ ಕಾರಣ ಸುಮಾರು 45ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಮನೆಗೆ ತೆರಳಿದರು.







