ಮಂಗಳೂರು: ಪ್ರಮುಖ ರಸ್ತೆಗೆ ತುಳು ಲಿಪಿ ನಾಮಫಲಕ ಅನಾವರಣ

ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಗೆ ಅಳವಡಿಸಲಾದ ತುಳು ಲಿಪಿಯ ನಾಮಫಲಕದ ಅನಾವರಣ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಕೆಲವು ಸಮಯದ ಹಿಂದೆ ತುಳು ಸಂಘಟನೆ ಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ವಿದ್ಯಾರ್ಥಿನಿಯೊಬ್ಬರು ಮಂಗಳದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವಂತೆ ಸ್ವತಃ ತಾನೇ ತುಳು ಲಿಪಿಯಲ್ಲಿ ಬರೆದು ಮನವಿ ಮಾಡಿದ್ದಳು. ಆಕೆಯ ಕೋರಿಕೆಯಂತೆ ಮಂಗಳಾದೇವಿ ದೇವಸ್ಥಾನ ರಸ್ತೆಗೆ ತುಳುವೆರ್ ಕುಡ್ಲ ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಿ ವಿದ್ಯಾರ್ಥಿನಿ ಶಿಶಿತಾಳಲ್ಲೇ ಉದ್ಘಾಟಿಸಿದ್ದೇವೆ ಎಂದರು.
ಈ ಸಂದರ್ಭ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ರಮೇಶ್ ಕಂಡೆಟ್ಟು, ತುಳುವೆರ್ ಕುಡ್ಲ ಸಂಘಟನೆಯ ಪ್ರಮುಖ ರಾದ ಪ್ರತೀಕ್ ಪೂಜಾರಿ, ಸಂತೋಷ್ ಕುಮಾರ್, ರೋಷನ್ ರೊನಾಲ್ಡ್, ಅಕ್ಷಯ್ ಪೇಜಾವರ, ಚರಿತ್ ಪೂಜಾರಿ, ಜಯರಾಮ್ ಎಚ್, ಪ್ರತೀಕ್ ರಾವ್, ಪವನ್ ಕುಮಾರ್, ಸುಳೀಲ್ ಪಾಲನ್ನ, ದೀಕ್ಷಿತ್ ಬಿ, ವರುಣ್, ಯಾದವ್ ಕೋಟ್ಯಾನ್, ಅರ್ಜುನ್ ಬೋಳಾರ್, ಕದ್ರಿ ಕ್ರಿಕೆಟರ್ಸ್‌ನ ಪ್ರಮುಖರಾದ ಜಗದೀಶ್ ಕದ್ರಿ, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು.





